ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಪಿ ನಡ್ಡಾ
ನವದೆಹಲಿ, ಜ. 20: ಆಡಳಿತಾರೂಡ ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಬಿಜೆಪಿ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ನಾಮನಿರ್ದೇಶನ ಪ್ರಕ್ರಿಯೆಯ ನಂತರ ಕಣದಲ್ಲಿದ್ದ ಏಕೈಕ ನಾಯಕ ಜೆಪಿ ನಡ್ಡಾ ಅವರ ಉಮೇದುವಾರಿಕೆಯನ್ನು ಪಕ್ಷದ ಉನ್ನತ ನಾಯಕರು ಅನುಮೋದಿಸಿದರು. ಜೆಪಿ ನಡ್ಡಾ ಅವರು ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿ ಬಿಜೆಪಿ ಹಿರಿಯ ನಾಯಕ ರಾಧಾ ಮೋಹನ್ ಸಿಂಗ್ ಅವರು ಘೋಷಿಸಿದ್ದಾರೆ. ಜೆಪಿ ನಡ್ಡಾ ಅವರು ಪಕ್ಷದ ಅತ್ಯಂತ ಯಶಸ್ವಿ ಅಧ್ಯಕ್ಷ ಎನಿಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯು ನಡ್ಡಾ ಅವರ ಪಾಲಿಗೆ ಮೊದಲ ಅಗ್ನಿ ಪರೀಕ್ಷೆಯಾಗಲಿದೆ. 1960ರ ಡಿಸೆಂಬರ್ 2 ರಂದು ನರೈನ್ ಲಾಲ್ ನಡ್ಡಾ ಮತ್ತು ಕೃಷ್ಣ ನಡ್ಡಾ ದಂಪತಿಗೆ ಜನಿಸಿದ ಜಗತ್ ಪ್ರಕಾಶ್ ನಡ್ಡಾ ಪಾಟ್ನಾದ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಪಾಟ್ನಾ ವಿಶ್ವವಿದ್ಯಾಲಯ, ಪಾಟ್ನಾ ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿ ಪಡೆದಿದ್ದಾರೆ. 2014 ಮತ್ತು 2019 ರ ನಡುವೆ ಅಮಿತ್ ಶಾ ನಾಯಕತ್ವದಲ್ಲಿ, ಬಿಜೆಪಿ ವಿವಿಧ ಹಂತಗಳಲ್ಲಿ ದೊಡ್ಡ ಸಂಘಟನೆಯಾಗಿ ಬೆಳೆದಿದೆ. ಬಿಜೆಪಿ ತನ್ನ ಅಸ್ತಿತ್ವ ಗಟ್ಟಿಯಾಗಿ ಅಧಿಕಾರವನ್ನು ಸೆರೆಹಿಡಿಯಲು ಸಮರ್ಥವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರ ಸೇರಿದೆ ಅದೆ ರೀತಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‍ಗೆ ಕೇಸರಿ ಪಕ್ಷವು ಗಂಭೀರ ಸವಾಲಾಗಿ ಪರಿಣಮಿಸಿದೆ. ದೆಹಲಿಯಲ್ಲಿ ಎಎಪಿ ವಿರುದ್ಧ ಬಿಜೆಪಿ ತೀವ್ರ ಸ್ಪರ್ದೆ ಎದುರಿಸುತ್ತಿರುವ ಕೆಲವೇ ದಿನಗಳ ಮೊದಲು ನಡ್ಡಾ ಅವರು ಪಕ್ಷದ ಸಾರಥ್ಯ ವಹಿಸಿಕೊಳ್ಳುತ್ತಿದ್ದು ಇದು ಅವರ ಪಾಲಿಗೆ ಮೊದಲ ಅಗ್ನಿ ಪರೀಕ್ಷೆಯಾಗಲಿದೆ. ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದಾಗ ಅಮಿತ್ ಶಾ ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯರು ಎಂಬ ಕೀರ್ತೀಗೆ ಭಾಜನರಾಗಿದ್ದರು. ಬಿಜೆಪಿಯ ಅಧ್ಯಕ್ಷರಲ್ಲಿ ಸಂಸ್ಥಾಪಕ ಪಿತಾಮಹರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಸೇರಿದ್ದಾರೆ, ಅವರು ಮೂರು ಅವಧಿಯಲ್ಲಿ 11 ವರ್ಷಗಳ ಕಾಲ ಪಕ್ಷದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಜೂನ್ 2019 ರಲ್ಲಿ, ಜೆ.ಪಿ. ನಡ್ಡಾ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಮೈಸೂರಿನಲ್ಲಿ ರಾಷ್ಟ್ರೀಯ ಭದ್ರತಾ ಪಡೆ
ಮೈಸೂರು, ಜ. 20: ಪ್ರವಾಸಿ ಕೇಂದ್ರವಾದ ಅರಮನೆ ನಗರಿಯಲ್ಲಿ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಹಾಗೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧತೆ ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ 100 ಸದಸ್ಯರ ತಂಡ ಸೋಮವಾರ ನಗರಕ್ಕೆ ಆಗಮಿಸಿದೆ. ಮೈಸೂರು ಅರಮನೆಯ ವಾರ್ಷಿಕ ನಿರ್ವಹಣೆ ಕಾರ್ಯವನ್ನು ಸೋಮವಾರ ಕೈಗೆತ್ತಿಕೊಳ್ಳಲಾಗಿದ್ದು, ಅರಮನೆಯ ಭದ್ರತೆ ಹೆಚ್ಚಿಸಲು ಎನ್‍ಎಸ್‍ಜಿ ಸಲಹೆಗಳು ಮತ್ತು ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ. ಎನ್‍ಎಸ್‍ಜಿ ಕಮಾಂಡೋಗಳು ಮೈಸೂರು ವಿಮಾನ ನಿಲ್ದಾಣಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ಎರಡು ದಿನಗಳ ಹಿಂದೆ ಕಮಾಂಡೋಗಳ ತಂಡ ಮೈಸೂರು ತಲುಪಿದ್ದು ಅರಮನೆ ಮಂಡಳಿಯ ಇಂಜನಿಯರುಗಳೊಂದಿಗೆ ಸಂವಾದ ನಡೆಸಿವೆ ಎಂದು ಅರಮನೆ ಮಂಡಳಿ ಮೂಲಗಳು ತಿಳಿಸಿವೆ. ಭಯೋತ್ಪಾದಕ ಚಟುವಟಿಕೆಗಳು ಎದುರಾದರೆ ಅವನ್ನು ತಡೆಯಲು ಕೆಲ ಪ್ರಮುಖ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸರ್ಕಾರಿ ಇಲಾಖೆಗಳು ಹಾಗೂ ಸ್ಥಳೀಯ ಆಡಳಿತಕ್ಕೆ ತರಬೇತಿ ನೀಡಲು ಎನ್‍ಎಸ್‍ಜಿ ಕಮಾಂಡೊ ತಂಡ ಮೈಸೂರಿನಲ್ಲಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಯಾನ್ಸರ್‍ನಿಂದ ಬಳಲುತ್ತಿರುವ ಮುತ್ತಪ್ಪ ರೈ
ಬೆಂಗಳೂರು, ಜ. 20: ಭೂಗತ ಜಗತ್ತಿನ ಕರಾಳ ದುನಿಯಾದಿಂದ ಹೊರಬಂದು ನೆಮ್ಮದಿಯ ಜೀವನ ನಡೆಸುತ್ತಿದ್ದ ಮುತ್ತಪ್ಪ ರೈ ಇದೀಗ ತಾವು ಇನ್ನು ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ತಮ್ಮ ಅನಾರೋಗ್ಯದ ಕುರಿತು ಎದ್ದಿರುವ ಅನುಮಾನಗಳ ಬಗ್ಗೆ ಸೋಮವಾರ ಬಿಡದಿ ಬಳಿಯ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಒಂದು ವರ್ಷದ ಹಿಂದೆ ಕುಕ್ಕೆಗೆ ಹೋಗುವ ಸಂದರ್ಭದಲ್ಲಿ ಬೆನ್ನು ನೋವು ಕಾಣಿಸಿಕೊಂಡಿತು. ನಂತರದಲ್ಲಿ ಪರೀಕ್ಷೆ ಮಾಡಿದಾಗ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ದೆಹಲಿಯ ಮ್ಯಾಕ್ಸ್, ಚೆನ್ಮೈನ ಅಪೆÇೀಲೊ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಶೇ.90ರಷ್ಟು ಗುಣ ಆಗಿರುವುದಾಗಿ ವೈದ್ಯರು ಹೇಳಿದರು. ಆದರೆ ನಂತರದಲ್ಲಿ ಮಿದುಳಿಗೆ ಕ್ಯಾನ್ಸರ್ ತಗುಲಿತ್ತು. ಕೆಲವು ತಿಂಗಳಷ್ಟೇ ಬದುಕುವುದಾಗಿ ವೈದ್ಯರು ಹೇಳಿದರು. ಹೀಗಾಗಿ ಬಿಡದಿಗೆ ವಾಪಸ್ ಆಗಿದ್ದೇನೆ. ನನಗೀಗ 68 ವರ್ಷ. ಐದು ಗುಂಡು ಬಿದ್ದರೂ ಬದುಕಿದವನು. ಸಾವಿಗೆ ಹೆದರುವುದಿಲ್ಲ. ವಿಲ್ ಪವರ್‍ನಿಂದ ಬದುಕುತ್ತಿದ್ದೇನೆ. ಸಮಾಜ ಸೇವೆ ಮುಂದುವರಿಸುತ್ತೇನೆ ಎಂದು ತಿಳಿಸಿದರು. ‘ವರ್ಷಕ್ಕೆ 20 ರಿಂದ 30 ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇನೆ. ಆಸ್ತಿ ಕುರಿತು ಈಗಾಗಲೇ ವಿಲ್ ಮಾಡಿಸಿದ್ದು, ಮಕ್ಕಳಿಗೂ ತಿಳಿಸಿದ್ದೇನೆ. ಕಳೆದ 15-20 ವರ್ಷಗಳಿಂದ ನನ್ನ ಜೊತೆಗಿರುವವರಿಗೆ ಒಂದೊಂದು ನಿವೇಶನ ಕೊಡುವಂತೆ ತಿಳಿಸಿದ್ದೇನೆ ಎಂದು ವಿವರಿಸಿದರು.