ಮಡಿಕೇರಿ. ಜ.21 - ಬೆಂಗಳೂರಿನ ಗಾಂಧಿನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕ್‍ನ ಕೇಂದ್ರ ಕಚೇರಿಯಲ್ಲಿ ಸಿಂಡಿಕೇಟ್ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರೊಂದಿಗೆ ರಾಜ್ಯದ ಬೆಳೆಗಾರ ಸಂಘಟನೆಗಳ ಪ್ರಮುಖರ ಸಭೆ ಜರುಗಿತು.
ಸಭೆಯಲ್ಲಿ 2018-19, 2019-20 ನೇ ಸಾಲಿನ ಎಲ್ಲಾ ರೀತಿಯ ಕಾಫಿ ಸಾಲಗಳನ್ನು ಮರುಹೊಂದಾ ಣಿಕೆ ಮಾಡುವಂತೆ ಆದೇಶವಿದ್ದರೂ ಸಹಾ ಇದು ಕಾರ್ಯಗತಗೊಂಡಿಲ್ಲ ವೆಂದು ಬೆಳೆಗಾರ ಸಂಘಟನೆಯ ಮುಖಂಡರು ತಿಳಿಸಿದ ಹಿನ್ನೆಲೆಯಲ್ಲಿ ಕಾಫಿಗೆ ಸಂಬಂಧಿಸಿದ ಎಲ್ಲಾ ಸಾಲ ಗಳನ್ನು ಶೇ.9 ರ ಬಡ್ಡಿದರದ ಅನ್ವಯ ಮರುಹೊಂದಾಣಿಕೆ ಮಾಡುವಂತೆ ಎಲ್ಲಾ ಬ್ಯಾಂಕುಗಳಿಗೆ ಆದೇಶ ನೀಡಲು ತೀರ್ಮಾನಿಸಲಾಯಿತು.
ಸಿಬಿಲ್‍ನ್ನು ಕೃಷಿ ಸಾಲದಿಂದ ಹೊರಗೆ ಇಡಬೇಕೆಂಬ ಮನವಿ ಮೇರೆಗೆ ಸಿಬಿಲ್ ದರ ಕಡಿಮೆಯಿದ್ದರೂ ಸಹಾ ಕೃಷಿ ಸಾಲ ನೀಡುವ ಬಗ್ಗೆ ಮುಂದಿನ ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಭರವಸೆಯಿತ್ತರು.ಕಾಫಿ ಮಂಡಳಿ ಶಿಫಾರಸ್ಸು ಮಾಡಿದ್ದೇ ಆದಲ್ಲಿ ಕಾಫಿ ಬೆಳೆಗಾರರ ಎಲ್ಲಾ ಸಾಲಗಳನ್ನು ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸಿ, ಕಡಿಮೆ ಬಡ್ಡಿ ದರವನ್ನು ವಿಧಿಸಲು ನಿರ್ಣಯಿಸಲಾಯಿತು.
ಸರ್ಕಾರವು ಕಾಫಿ ಬೆಳೆಗಾರರಿಗೆ ನೀಡುತ್ತಿರುವ ಪರಿಹಾರದ ಹಣ ಹಾಗೂ ವಿಮೆಯ ಹಣವನ್ನು ಬ್ಯಾಂಕುಗಳು ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿರುವ ವಿಷಯವನ್ನು ಬೆಳೆಗಾರ ಸಂಘಟನೆಯ ಪ್ರತಿನಿಧಿಗಳು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಾಫಿ ವಿಮೆ ಮತ್ತು ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮೆ ಮಾಡದಂತೆ ಎಲ್ಲಾ ಬ್ಯಾಂಕುಗಳಿಗೆ ಆದೇಶ ನೀಡಲು ಸಮ್ಮತಿಸಲಾಯಿತು.
ಬೆಳೆಗಾರರ ಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸುವ ವಿಚಾರದಲ್ಲಿ ಮುಂದಿನ ರಾಜ್ಯ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಕಾಫಿ ಬೆಳೆಗಾರರಿಗೆ ಸಾಲ ನೀಡುವ ವಿಚಾರದಲ್ಲಿ ಕ್ಷೇತ್ರವೀಕ್ಷಣೆ ಮತ್ತು ದಾಖಲಾತಿ ಸಿದ್ದಪಡಿಸಲು ವಿಧಿಸುತ್ತಿರುವ ಶುಲ್ಕದಿಂದ ಹೊರೆಯಾಗುತ್ತಿರುವುದರಿಂದಾಗಿ ಈ ಶುಲ್ಕಗಳನ್ನು ರದ್ದುಪಡಿಸಲು ಕ್ರಮಕೈಗೊಳ್ಳಲು ತೀರ್ಮಾನಿಸಲಾ ಯಿತು. ಸಾಲ ಪಡೆಯುವ ಬೆಳೆಗಾರರಿಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸರಳ ಅಡಮಾನದ ಅನುಸಾರ ಸಾಲ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ ಪರಿಶೀಲನೆಗೆ ನಿರ್ಧರಿಸಲಾಯಿತು.