ಮಡಿಕೇರಿ, ಜ. 21: ಮಡಿಕೇರಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275ರಲ್ಲಿ ಮಡಿಕೇರಿಯಿಂದ 10 ಕಿ.ಮೀ. ದೂರದಲ್ಲಿ ಶ್ರೀ ಭದ್ರಕಾಳಿ ದೇವಸ್ಥಾನ ಇದ್ದು, ಈ ದೇವಸ್ಥಾನಕ್ಕೆ ಸೇರಿದ ಸುಮಾರು 30 ಎಕರೆ ದೇವರ ಕಾಡು ಇದೆ.

ಈ ದೇವರಕಾಡು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಇದ್ದು, ಈ ದೇವರ ಕಾಡಿಗೆ ತಂತಿಬೇಲಿ ಅಳವಡಿಸಲು ಈಗ ಸುಮಾರು 5,6 ವರುಷಗಳ ಹಿಂದೆ ಅರಣ್ಯ ಇಲಾಖೆಯವರು ಒಂದು ಲಾರಿ ಲೋಡಿನಷ್ಟು ಸಿಮೆಂಟ್ ಕಂಬಗಳನ್ನು ರಸ್ತೆಯಲ್ಲಿ ಅಲ್ಲಲ್ಲಿ ಇಳಿಸಿದ್ದು, ಈವರೆಗೂ ಕಂಬ ನೆಟ್ಟು ತಂತಿಬೇಲಿ ಅಳವಡಿಸಿರುವುದಿಲ್ಲ. ಸಿಮೆಂಟ್ ಕಂಬಗಳು ಅಲ್ಲಲ್ಲಿ ಅನಾಥವಾಗಿ ಬಿದ್ದಿದ್ದು, ಬಹಳಷ್ಟು ಕಂಬಗಳು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ನಾಶವಾಗಿವೆ.

ಅಲ್ಲೊಂದು ಇಲ್ಲೊಂದು ಕಂಬಗಳು ಬಿದ್ದಿರುವುದು ಕಾಣಬಹುದಾಗಿದೆ. ಇದು ಅರಣ್ಯ ಇಲಾಖೆಯಲ್ಲಿ ಕಾಮಗಾರಿ ನಿರ್ವಹಣೆಯಲ್ಲಿ ಆಗಿರುವ ಕರ್ತವ್ಯಲೋಪ, ಹಣ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇಲಾಖೆಯ ಹಿರಿಯ ಅಧಿಕಾರಿಗಳು, ಶಾಸಕರುಗಳು, ಜಿಲ್ಲ್ಲಾ ಉಸ್ತುವಾರಿ ಸಚಿವರುಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕಾಮಗಾರಿಗಳ ಅನುಷ್ಟಾನದ ಬಗ್ಗೆ ಸಭೆಗಳನ್ನು ನಡೆಸಿ ಚರ್ಚಿಸಿದಾಗ ಕಾಮಗಾರಿಗಳ ಅನುಷ್ಟಾನ ಅಧಿಕಾರಿಗಳು ಸಲ್ಲಿಸುವ ತಕ್ತೆಗಳನ್ನು (ಸ್ಟೇಟ್‍ಮೆಂಟ್) ಅವಲಂಬಿತರಾಗುವುದರಿಂದ ಈ ರೀತಿಯ ಲೋಪಗಳಿಗೆ ಕಾರಣವಾಗುತ್ತದೆ. ಕಾಮಗಾರಿ ಗಳನ್ನು ನಿರ್ವಹಿಸಿದ ಬಗ್ಗೆ ಹಾಗೂ ಕಾಮಗಾರಿಯ ಗುಣಮಟ್ಟದ ಬಗ್ಗೆ ಉನ್ನತ ಅಧಿಕಾರಿಗಳಿಂದ ಆಗಿಂದಾಗ್ಗೆ ತನಿಖೆ ನಡೆಸುವ ಕ್ರಮವನ್ನು ಅನುಸರಿಸಿದಲ್ಲಿ ಈ ರೀತಿಯ ಕರ್ತವ್ಯಲೋಪ ಕಳಪೆ ಕಾಮಗಾರಿ ಮತ್ತು ಹಣ ದುರುಪ ಯೋಗಕ್ಕೆ ಅವಕಾಶವಾಗುವುದಿಲ್ಲ.

ಆದ್ದರಿಂದ ಈ ವಿಚಾರದೆಡೆ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳು, ಅರಣ್ಯ ಸಂರಕ್ಷಣಾಧಿಕಾರಿಗಳು ಗಮನಹರಿಸಿ ತನಿಖೆ ನಡೆಸಿದಲ್ಲಿ ಕಾಮಗಾರಿಯಲ್ಲಿ ಆಗಿರುವ ಲೋಪಗಳನ್ನು ಪತ್ತೆ ಹಚ್ಚಬಹುದಾಗಿರುತ್ತದೆ ಹಾಗೂ ಕರ್ತವ್ಯಲೋಪ ಮತ್ತು ಹಣ ದುರುಪಯೋಗವನ್ನು ಆದಷ್ಟು ಕಡಿಮೆ ಮಾಡಬಹುದಾಗಿರುತ್ತದೆ.

-ವೈ.ಪಿ. ತಿಮ್ಮಯ್ಯ, ಕೆದಕಲ್.