ಕುಶಾಲನಗರ, ಜ. 19: ಕುಶಾಲನಗರ ಪಟ್ಟಣ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ನದಿ ನೀರಿನ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರು ನೂತನ ಹೋರಾಟ ಸಮಿತಿಯೊಂದನ್ನು ರಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತೆ ಅನಾಹುತಗಳು ಮರುಕಳಿಸದಂತೆ ಕೂಡಲೆ ಕಾರ್ಯಯೋಜನೆ ರೂಪಿಸುವಂತೆ ಸರಕಾರಕ್ಕೆ ಆಗ್ರಹಿಸಲು ಕಾವೇರಿ ನದಿ ಪ್ರವಾಹ ಪೀಡಿತರ ರಕ್ಷಣಾ ವೇದಿಕೆ ಎಂಬ ಸಮಿತಿ ರಚಿಸಲಾಗಿದೆ. ಈ ಸಂಬಂಧ ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಪ್ರವಾಹ ಸಂತ್ರಸ್ತರ ಪ್ರತಿನಿಧಿಗಳ ಸಭೆ ನಡೆಯಿತು.
ಕುಶಾಲನಗರ ಪಟ್ಟಣ ಬಹುತೇಕ ಕಾವೇರಿ ನದಿ ತಟದ ಒತ್ತಿನಲ್ಲಿದ್ದು ಪಟ್ಟಣದ ಬಡಾವಣೆಗಳು ನೀರಿನಿಂದ ಅವೃತಗೊಳ್ಳುತ್ತಿದ್ದು ಸುಮಾರು 600 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಸಾರ್ವಜನಿಕ ಆಸ್ತಿಪಾಸ್ತಿಗೆ ಭಾರೀ ನಷ್ಟವುಂಟಾಗುತ್ತಿದೆ. ಅಲ್ಲದೆ ನದಿ ತಟದ ಕೊಪ್ಪ ಗ್ರಾಮದ ಭಾಗಗಳು ಕೂಡ ನೀರಿನಿಂದ ಮುಳುಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ವ್ಯವಸ್ಥೆಗೆ ಕೂಡ ಅಡ್ಡಿಯುಂಟಾಗಿತ್ತು. ಈ ಮೂಲಕ ಮಳೆಗಾಲದಲ್ಲಿ ಜನಜೀವನವೇ ಅಸ್ತವ್ಯಸ್ಥಗೊಳ್ಳುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರಕಾರಕ್ಕೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲು ಸಭೆ ನಿರ್ಧರಿಸಿತು.
ಕಾವೇರಿ ನದಿಯ ಮೂಲ ಅಸ್ತಿತ್ವ ಉಳಿಸುವುದರೊಂದಿಗೆ ಪ್ರವಾಹದ ಬಗ್ಗೆ ವಾಸ್ತವಾಂಶ ಅರಿಯಲು ತಜ್ಞರ ಸಮಿತಿಯೊಂದನ್ನು ರಚಿಸುವುದು, ಆ ಮೂಲಕ ನದಿಯ ಹೂಳೆತ್ತುವ ಬಗ್ಗೆ ಕಾರ್ಯಯೋಜನೆ ರೂಪಿಸುವುದು, ಮುಂದಿನ ದಿನಗಳಲ್ಲಿ ಪ್ರವಾಹ ಬಂದು ಮನೆಗಳಿಗೆ ನೀರು ನುಗ್ಗದಂತೆ ಕೂಡಲೆ ಕಾರ್ಯಯೋಜನೆ ರೂಪಿಸಲು ಸಮಿತಿ ಮೂಲಕ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಲು ಸಭೆ ನಿರ್ಣಯ ಕೈಗೊಂಡಿತು.
ಈ ಸಂಬಂಧ ರಚನೆಗೊಂಡ ಕಾವೇರಿ ನದಿ ಪ್ರವಾಹ ಸಂತ್ರಸ್ತರ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಎಂ.ಎನ್. ಚಂದ್ರಮೋಹನ್, ಉಪಾಧ್ಯಕ್ಷರಾಗಿ ತೋರೆರ ಉದಯಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣವರದ, ಕಾರ್ಯಾಧ್ಯಕ್ಷರಾಗಿ ಎಂ.ಎಂ.ಚರಣ್, ಖಜಾಂಚಿಯಾಗಿ ಕೊಡಗನ ಹರ್ಷ ಅವರನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ವಿವಿಧ ಬಡಾವಣೆಗಳಿಂದ ತಲಾ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಸಮಿತಿ ರಚಿಸಲಾಯಿತು.
ಈ ಸಂದರ್ಭ ಕುಶಾಲನಗರದ ಕುವೆಂಪು ಬಡಾವಣೆ, ಸಾಯಿ, ಬಸಪ್ಪ, ಇಂದಿರಾ, ಶೈಲಜಾ, ರಸೂಲ್ ಬಡಾವಣೆಗಳು, ದಂಡಿನಪೇಟೆ, ಕೊಪ್ಪ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.