ವಾಣಿಜ್ಯ ಬೆಳೆ ಕಾಫಿ ತನ್ನ ಅಪೂರ್ವ ಸುವಾಸನೆ ಹಾಗೂ ರುಚಿಯಿಂದಾಗಿ ವಿಶ್ವಾದ್ಯಂತ ಹೆಸರುವಾಸಿ ಆಗಿದೆ. ಇಂದು ಕೋಟ್ಯಾಂತರ ಜನರಿಗೆ ದಿನ ಬೆಳಗಾಗುತ್ತಿದ್ದಂತೆ ಒಂದು ಕಪ್ ಕಾಫಿ ಕುಡಿಯದಿದ್ದರೆ ದಿನವು ಆರಂಭವಾಗುವುದೇ ಇಲ್ಲ. ಲಕ್ಷಾಂತರ ಜನರು ಈ ಪಾನೀಯಕ್ಕೆ ದಾಸರಾಗಿಬಿಟ್ಟಿದ್ದಾರೆ. ನಿತ್ಯ ಎರಡು ಅಥವಾ ನಾಲ್ಕು ಕಪ್ ಮತ್ತು ಅದಕ್ಕಿಂತಲೂ ಜಾಸ್ತಿ ಕುಡಿಯುವವರೂ ಇದ್ದಾರೆ. ಇಂದು ದೇಶದ ಕಾಫಿ ಉತ್ಪಾದನೆಯಲ್ಲಿ ಗಣನೀಯ ಪಾಲು ಹೊಂದಿರುವುದು ಕರ್ನಾಟಕ ಮಾತ್ರ. ನಮ್ಮ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುವ ಕಾಫಿ ಗುಣಮಟ್ಟ ಹಾಗೂ ರುಚಿಯಲ್ಲಿ ಉತ್ಕೃಷ್ಟ ದರ್ಜೆಯದ್ದಾಗಿದೆ. ದೇಶದ ಒಟ್ಟು ಕಾಫಿ ಉತ್ಪಾದನೆಯಾದ ಸುಮಾರು 3.6 ಲಕ್ಷ ಟನ್‍ಗಳಲ್ಲಿ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೇ ಶೇಕಡಾ 70 ರಷ್ಟು ಪಾಲು ಇದ್ದರೆ ಇದರಲ್ಲಿ ಪುಟ್ಟ ಜಿಲ್ಲೆ ಕೊಡಗು ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡಾ 30ಕ್ಕೂ ಅಧಿಕ ಪಾಲು ಹೊಂದಿದೆ. ಇದು ಜಿಲ್ಲೆಯ ಹೆಗ್ಗಳಿಕೆ.

ಕಾಫಿಯ ಬೀಜವು ದೇಶಕ್ಕೆ ಬಂದಿದ್ದು ಅರಬ್ ವರ್ತಕರಿಂದ ಎಂದು ಹೇಳಲಾಗಿದ್ದು 1670ನೇ ಇಸವಿಯಲ್ಲಿ ಚಿಕ್ಕಮಗಳೂರು ಸಮೀಪದ ಬಾಬಾ ಬುಡನ್ ಗಿರಿಯಲ್ಲಿ ದೇಶದಲ್ಲೇ ಮೊದಲ ಕಾಫಿ ಬೆಳೆ ಬೆಳೆಯಲಾಯಿತು. ಈ ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿದ ಖ್ಯಾತಿ ಓರ್ವ ಮಹಿಳೆಯದ್ದಾಗಿದ್ದು ಇದರ ಹಿಂದೆ ರೋಚಕ ಯಶೋಗಾಥೆಯೊಂದು ಇದೆ ಎಂದು ಬಹಳಷ್ಟು ಬೆಂಗಳೂರಿಗರಿಗೆ ಇನ್ನೂ ಗೊತ್ತಿಲ್ಲ.

ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿ ಅಲ್ಲೆ ಹುರಿದು ಪುಡಿ ಮಾಡುವ ಮಿಲ್‍ನ್ನು ಸ್ಥಾಪಿಸಿ ಮನೆ ಮನೆಗಳಿಗೂ ಕಾಫಿ ಮಾರಾಟ ಮಾಡಿದ ಮಹಿಳಾ ಉದ್ಯಮಿಯೇ ದೊಡ್ಡ ಮನೆ ಸಾಕಮ್ಮ.

1880ನೇ ಇಸವಿಯಲ್ಲಿ ತುಮಕೂರು ಜಿಲ್ಲೆಯ ಬಿದರೆ ಎಂಬ ಊರಿನಲ್ಲಿ ಜನಿಸಿದ ಸಾಕಮ್ಮ ಅವರ ಕುಟುಂಬ ಉತ್ತಮ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ವಲಸೆ ಬಂದಿತು.

ಚಿಕ್ಕ ಬಾಲಕಿಯಾಗಿದ್ದಾಗಲೇ ಕಲಿಕೆಯಲ್ಲಿ ಆಸಕ್ತಿ ಮತ್ತು ಕುತೂಹಲ ಹೊಂದಿದ್ದ ಸಾಕಮ್ಮ ಅವರ ಆಸೆಗೆ ಪೋಷಕರೂ ಸಕಾರಾತ್ಮಕವಾಗೇ ಸ್ಪಂದಿಸಿದರು. ಇದರಿಂದಾಗಿ ಸಾಕಮ್ಮ ಅಂದಿನ ಕಾಲದಲ್ಲೇ ಮಾಧ್ಯಮಿಕ ಪಡೆದ ಕೆಲವೇ ಬಾಲಕಿಯರಲ್ಲಿ ಒಬ್ಬರಾಗಿದ್ದರು.

ಬಹುಶಃ ಕುಟುಂಬದ ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಸಾಕಮ್ಮ ಅವರು ತಮ್ಮ ಹದಿನಾರನೇ ವಯಸ್ಸಿನಲ್ಲೇ ಅನಿವಾರ್ಯವಾಗಿ ತಮಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯರಾಗಿದ್ದ ಕೊಡಗಿನ ಸೋಮವಾರಪೇಟೆಯಲ್ಲಿ ಅಗರ್ಭ ಶ್ರೀಮಂತರೇ ಆಗಿದ್ದ ದೊಡ್ಡಮನೆ ಚಿಕ್ಕ ಬಸಪ್ಪ ಶೆಟ್ಟಿ ಅವರನ್ನು ವರಿಸಬೇಕಾಯಿತು. ಆ ಸಮಯದಲ್ಲೇ ಚಿಕ್ಕ ಬಸಪ್ಪ ಅವರಿಗೆ ಎರಡು ಮದುವೆ ಆಗಿದ್ದು ಮಕ್ಕಳಿರಲಿಲ್ಲ. ಮದುವೆ ಆದ ಎರಡೇ ವರ್ಷಗಳಲ್ಲಿ ಚಿಕ್ಕ ಬಸಪ್ಪ ಅವರು ತೀರಿಕೊಂಡರು.

ಅಂದಿನ ಬ್ರಿಟಿಷ್ ಕಾಲದಲ್ಲೇ ಸಾಕಮ್ಮ ಕುಟುಂಬಕ್ಕೆ ನೂರಾರು ಎಕರೆ ಕಾಫಿ ತೋಟವಿತ್ತು. ಈ ಬೃಹತ್ ಕಾಫಿ ತೋಟದ ಜತೆಗೇ ನೂರಾರು ಆಳು ಕಾಳುಗಳ ನಿರ್ವಹಣೆ ಇವರ ಹೆಗಲಿಗೇ ಬಿತ್ತು. ಏಕೆಂದರೆ ಚಿಕ್ಕಬಸಪ್ಪ ಅವರ ಮೊದಲ ಇಬ್ಬರು ಪತ್ನಿಯರೂ ಹೆಚ್ಚಿಗೆ ಓದಿದವರಾಗಿರಲಿಲ್ಲ. ಆದರೆ ಚತುರೆ ಆಗಿದ್ದ ಸಾಕಮ್ಮ ಬಹಳ ಬೇಗನೇ ಕಾಫಿ ತೋಟದ ನಿರ್ವಹಣೆಯನ್ನು ಕಲಿತಿದ್ದಲ್ಲದೆ ತೋಟಗಳು ಹೆಚ್ಚು ಫಸಲನ್ನು ನೀಡುವಂತೆ ಗಿಡಗಳ ಆರೈಕೆ ಮಾಡಿ ಅದರಲ್ಲೂ ಸೈ ಅನ್ನಿಸಿಕೊಂಡರು. ಅಷ್ಟರಲ್ಲಿ ಚಿಕ್ಕಬಸಪ್ಪ ಅವರ ಮೊದಲ ಇಬ್ಬರು ಪತ್ನಿಯರು ಕಾಲವಾಗಿದ್ದರು.

ಮಹತ್ವಾಕಾಂಕ್ಷಿ ಆಗಿದ್ದ ಸಾಕಮ್ಮ ಅವರು ಬರೇ

(ಮೊದಲ ಪುಟದಿಂದ) ಕಾಫಿಯ ಉತ್ಪಾದನೆ ಹೆಚ್ಚಿಸಿದ್ದೆ ಸಾಕೆಂದು ಸುಮ್ಮನೇ ಕೂರಲಿಲ್ಲ. ಬದಲಿಗೆ ಕಾಫಿಯ ಬಳಕೆ ಹೆಚ್ಚಿಸಿ ಕಾಫಿಗೆ ಉತ್ತಮ ಮಾರುಕಟ್ಟೆ ದೊರೆಯುವಂತೆ ಮಾಡಲೂ ಪ್ರಯತ್ನಿಸಿದರು. ಆ ಪ್ರಯತ್ನದ ಫಲವಾಗಿಯೇ ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ 1920 ನೇ ಇಸವಿಯಲ್ಲಿ ಮೊತ್ತ ಮೊದಲ ಕಾಫಿ ಕ್ಯೂರಿಂಗ್ ಹಾಗೂ ಪೌಡರಿಂಗ್ ಘಟಕವನ್ನು ಸ್ಥಾಪಿಸಿದರು. ಅಂದಿನ ಕಾಲದಲ್ಲಿ ಭಾರತದಲ್ಲಿ ಯಂತ್ರೋಪಕರಣಗಳನ್ನು ತಯಾರಿಸದಿದ್ದ ಕಾರಣದಿಂದಾಗಿ ಇಂಗ್ಲೆಂಡ್‍ನಿಂದ ಯಂತ್ರಗಳನ್ನು ತರಿಸಲಾಯಿತು ಎನ್ನಲಾಗಿದೆ.

ಸಾಕಮ್ಮ ಅವರ ಕಾಫಿ ಪುಡಿ ಬಹು ಬೇಗನೇ ಬೆಂಗಳೂರಿನಲ್ಲಿ ಜನಪ್ರಿಯವಾಯಿತಲ್ಲದೆ ಇದರಿಂದ ಕಾಫಿ ಪುಡಿ ಸಾಕಮ್ಮ ಎಂಬ ಹೆಸರೂ ಅವರಿಗೆ ಲಭಿಸಿತು!. ಇವರ ಘಟಕದಿಂದ ಕಾಫಿ ಪುಡಿ ಖರೀದಿಸಿ ಅನೇಕರು ನಗರದ ವಿವಿಧೆಡೆಗಳಲ್ಲಿ ಕಾಫಿ ಮಾರಾಟ ಕೇಂದ್ರಗಳನ್ನು ತೆರೆದರು. ಕನ್ನಡದ ಜನಪ್ರಿಯ ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಿ.ವಿ. ಗುಂಡಪ್ಪ ಅವರು ತಮ್ಮ ಸಾಹಿತ್ಯ ರಚನೆಗಳಲ್ಲಿ ಸಾಕಮ್ಮ ಅವರ ಕಾಫಿಯನ್ನೂ ಉಲ್ಲೇಖಿಸಿದ್ದರು ಎಂದರೆ ಕಾಫಿಯ ಜನಪ್ರಿಯತೆಯ ಮಟ್ಟ ನಮಗೆ ಅರಿವಾಗುತ್ತದೆ.

ಶೀಘ್ರದಲ್ಲೇ ಸಾಕಮ್ಮ ಕಾಫಿ ವಕ್ರ್ಸ್ ಬೆಂಗಳೂರಿನಲ್ಲಿ ಮನೆ ಮಾತಾಯಿತು. ಓರ್ವ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡ ಸಾಕಮ್ಮ ಅವರನ್ನು ಅಂದಿನ ಮೈಸೂರು ಸರ್ಕಾರ ಕೈಗಾರಿಕಾ ಅಭಿವೃದ್ಧಿ ಮಾಡಲು ಸಮಿತಿಯೊಂದನ್ನು ರಚಿಸಿ ಆ ಸಮಿತಿಗೆ ಸೇರಿಸಿಕೊಂಡಿತು. ಇದೆಲ್ಲದರಿಂದ ಸಾಕಮ್ಮ ಬೆಂಗಳೂರಿನ ಗಣ್ಯ ವ್ಯಕ್ತಿಗಳಲ್ಲೊಬ್ಬರಾಗಿ ಹೊರಹೊಮ್ಮಿದರು.

ಆ ಸಮಯದಲ್ಲೇ ಬಡ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗಲೆಂದು ವಿಶ್ವೇಶ್ವರ ಪುರಂನಲ್ಲಿ ಸಾಕಮ್ಮ ಹಾಸ್ಟೆಲ್ ಒಂದನ್ನೂ ನಿರ್ಮಿಸಿದರು. ಇದು ಈಗ ಕುರುಹಿನಶೆಟ್ಟಿ ಸಂಘದ ಕೇಂದ್ರ ಕಚೇರಿಯಾಗಿದೆ. ಇಲ್ಲೇ ಕಲ್ಯಾಣ ಮಂಟಪವೂ ಇದೆ. ಇದರ ಜತೆಗೇ ಹಲವಾರು ದಾನ ಧರ್ಮ ಕಾರ್ಯಗಳಿಗೂ ಇವರು ಮುಂದಾಗಿದ್ದು, ಇವರು ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ಘಟಕವನ್ನು ನಡೆಸುತ್ತಿದ್ದ ಪ್ರದೇಶವನ್ನು ಈಗಲೂ ಸಾಕಮ್ಮ ಗಾರ್ಡನ್ ಎಂದು ಕರೆಯಲಾಗುತ್ತದೆ.

ವ್ಯಾಪಾರ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯನ್ನು ಗುರುತಿಸಿ, ಮೈಸೂರು ಮಹಾರಾಜರಾದ ಶ್ರೀ ಕೃಷ್ಣರಾಜ ಒಡೆಯಾರ್ ಅವರು ಸಾಕಮ್ಮ ಅವರಿಗೆ ‘ಲೋಕಸೇವ ಪಾರಾಯಣೆ’ ಎಂಬ ಪ್ರತಿಷ್ಠಿತ ಬಿರುದನ್ನು ನೀಡಿ ಗೌರವಿಸಿದರು. ಮಹಿಳೆಯರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಸೀಮಿತ ಅವಕಾಶಗಳನ್ನು ಹೊಂದಿದ್ದ ಆ ಕಾಲದಲ್ಲಿ ಬ್ರಿಟಿಷರು ಅವರಿಗೆ ‘ಕೈಸರ್-ಐ-ಹಿಂದ್’ ಪದಕವನ್ನು ನೀಡಿದರು. ಅವರು 1928ರಲ್ಲಿ ಹಿಂದಿನ ಮೈಸೂರು ಪ್ರತಿನಿಧಿ ಸಭೆಗೆ ನಾಮನಿರ್ದೇಶನಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಕಾಫಿಗೆ ದೇಶೀ ಮಾರುಕಟ್ಟೆ ಕಡಿಮೆ. ಈಗಲೂ ನಾವು ಬೆಳೆದ ಶೇಕಡಾ 70 ರಷ್ಟು ಕಾಫಿ ವಿದೇಶಕ್ಕೆ ರಫ್ತಾಗುತ್ತಿದೆ. ಅಂದಿನ ಕಾಲದಲ್ಲಿಯೂ ಸಾಕಮ್ಮ ಅವರು ಬ್ರಿಟಿಷರ ಜತೆ ಹಡಗಿನಲ್ಲಿ ಕಾಫಿಯನ್ನು ವಿದೇಶಗಳಿಗೆ ಮಾರಾಟ ಮಾಡುತಿದ್ದರು. ಹೀಗೆ ಓರ್ವ ಗೃಹಿಣಿ , ಮಹಿಳಾ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಸಾಕಮ್ಮ 1950ನೇ ಇಸವಿಯಲ್ಲಿ ನಿಧನರಾದರು . ತಮಗೆ ಮಕ್ಕಳಿಲ್ಲದಿದ್ದರೂ ಅನೇಕ ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸಿ ತಮ್ಮ ಆಸ್ತಿಯನ್ನು ಮಕ್ಕಳಿಗೆ ಹಂಚಿದ್ದಾರೆ.

ಜಿಲ್ಲೆಯಲ್ಲಿ ಇಂದಿಗೂ ಕಂಪೆನಿ ತೋಟಗಳನ್ನು ಹೊರತುಪಡಿಸಿದರೆ ಸಾವಿರಾರು ಎಕರೆ ತೋಟ ಇರುವುದು ದೊಡ್ಡಮನೆ ಸಾಕಮ್ಮ ಕುಟುಂಬಕ್ಕೆ ಮಾತ್ರ. ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ, ನಗರೂರು, ಬಳಗುಂದ, ಕುಸಬೂರು, ಗರಗಂದೂರು, ಮಾದಾಪುರ, ಸುಂಟಿಕೊಪ್ಪದ ಬೆಟ್ಟಗೇರಿ ಎಸ್ಟೇಟ್ ಸಾಕಮ್ಮ ಅವರ ಕುಟುಂಬಸ್ಥರದ್ದೇ ಆಗಿದೆ.

ಸೋಮವಾರಪೇಟೆಯ ಸಾರ್ವಜನಿಕ ಆಸ್ಪತ್ರೆ, ಪೋಲೀಸ್ ಠಾಣೆ, ತಹಶೀಲ್ದಾರ್ ಕಚೇರಿ, ಚಿಕ್ಕಬಸಪ್ಪ ಕ್ಲಬ್, ತಾಲೂಕು ಪಂಚಾಯಿತಿ ಕಚೇರಿ, ಪಶು ವೈದ್ಯಕೀಯ ಆಸ್ಪತ್ರೆ, ತೋಟಗಾರಿಕಾ ಕೃಷಿ ಇಲಾಖಾ ಕಚೇರಿ, ಪಟ್ಟಣ ಪಂಚಾಯಿತಿ ಕಚೇರಿ, ಚೆನ್ನಬಸಪ್ಪ ಹಾಲ್ ಹೀಗೆ ಬಹುತೇಕ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿರುವುದು ಸಾಕಮ್ಮ ಅವರು ಉದಾರವಾಗಿ ದಾನ ನೀಡಿದ ಭೂಮಿಯಲ್ಲೇ ಎಂಬುದನ್ನು ಮರೆಯುವಂತಿಲ್ಲ.

ಹೀಗೆ ಸಾಕಮ್ಮ ಅವರ ಜೀವನ ಗಾಥೆ ಮಹಿಳಾ ಉದ್ಯಮಿಗಳಿಗೊಂದು ಸ್ಫೂರ್ತಿದಾಯಕ ಉದಾಹರಣೆ ಆಗಬಲ್ಲುದು.

-ಕೋವರ್ ಕೊಲ್ಲಿ ಇಂದ್ರೇಶ್