ಕುಶಾಲನಗರ, ಜ. 19: ಪ್ರಥಮ ಚಿಕಿತ್ಸೆಯ ಮಹತ್ವ, ಕ್ಯಾನ್ಸರ್ ಮತ್ತಿತರ ಮಾರಕ ರೋಗಗಳ ಬಗೆಗಿನ ಅರಿವಿನ ಕೊರತೆಗಳೆ ಬಹುತೇಕ ರೋಗಿಗಳ ಸಾವಿಗೆ ಕಾರಣವಾಗುತ್ತಿವೆ ಎಂದು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಅಭಿಪ್ರಾಯಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ಜ್ಞಾನ ಕಾವೇರಿ, ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಯೆನಪೋಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ವಿಜ್ಞಾನ ಸಂಕೀರ್ಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಪ್ರಥಮ ಚಿಕಿತ್ಸೆ, ಮೂಲಭೂತ ಜೀವನ ಸಂರಕ್ಷಣೆ ಹಾಗೂ ಕ್ಯಾನ್ಸರ್ ಪತ್ತೆ ಮತ್ತು ಅರಿವು” ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿರುವ ಜನರಿಗೆ ಸಾಮಾನ್ಯ ಮಾಹಿತಿಗಳ ಕೊರತೆಗಳು ಕಾರಣವಾಗಿವೆ. ಯಾವುದೇ ಬಗೆಯ ಕಾಯಿಲೆಗಳನ್ನು ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಎಚ್ಚರಿಕೆ ವಹಿಸದಿದ್ದರೆ ಜೀವಕ್ಕೆ ಕುತ್ತು ಬರುವುದು ಖಂಡಿತ. ವಿಶ್ವ ವಿದ್ಯಾನಿಲಯಗಳ ಮಟ್ಟದಲ್ಲಿ ಇಂದಿನ ಯುವಜನತೆಯನ್ನು ಕೇಂದ್ರವಾಗಿರಿಸಿ ಕೊಂಡು ನಡೆಸುತ್ತಿರುವ ಇಂತಹ ವಿಶೇಷ ಕಾರ್ಯಕ್ರಮಗಳು ಅತ್ಯಂತ ಅವಶ್ಯಕವೂ ಅರ್ಥಪೂರ್ಣವೂ ಆಗಿವೆ ಎಂದು ತಿಳಿಸಿದರು.
ಯೆನಪೋಯ ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕರಾದ ಡಾ. ಅಶ್ವಿನಿ ಶೆಟ್ಟಿ ಅವರು, ಸ್ಥನ ಕ್ಯಾನ್ಸರ್ ರೋಗದ ಬಗ್ಗೆ ತಿಳುವಳಿಕೆ ಕೊಟ್ಟರು. ಸ್ಥನ ಕ್ಯಾನ್ಸರ್ನ್ನು ಮನೆಯಲ್ಲೆ ಸ್ವಯಂ ಪರೀಕ್ಷಿಸಿಕೊಳ್ಳುವ ವಿಧಾನವನ್ನು ತಿಳಿಸುತ್ತಾ ಚಿಕಿತ್ಸೆಯ ಬಗೆಗೆ ಜಾಗೃತಿ ಮೂಡಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಇಮ್ರಾನ್ ಪಾಶ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿರುವ ಕುರಿತು ಮಾಹಿತಿ ನೀಡುತ್ತಾ, ಗುಣಪಡಿಸಬಹುದಾದ ಕ್ಯಾನ್ಸರ್ಗಳು, ಯಾವ ವಯಸ್ಸಿನಲ್ಲಿ ಕ್ಯಾನ್ಸರ್ ಬರಬಹುದಾಗಿ, ಕ್ಯಾನ್ಸರ್ ಬರುವುದಕ್ಕೆ ಇರುವ ಕಾರಣಗಳು ಹಾಗೂ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಆರ್. ಪ್ರಜೇತ್, ಪ್ರಥಮ ಚಿಕಿತ್ಸೆಗಳು ಅವುಗಳ ವಿಧಗಳ ಬಗ್ಗೆ ವಿವರಿಸಿದರು. ಬೇರೆ ಬೇರೆ ಸಂದರ್ಭಗಳಲ್ಲಿ ಯಾವ ಯಾವ ಪ್ರಥಮ ಚಿಕಿತ್ಸೆಗಳನ್ನು ಸಮಯಕ್ಕೆ ಅನುಗುಣವಾಗಿ ಮಾಡಬಹುದು. ಬಾಯಿ ಕ್ಯಾನ್ಸರ್ಗೆ ಕಾರಣಗಳ ಪತ್ತೆ ಹಚ್ಚುವಿಕೆ ಹಾಗೂ ಚಿಕಿತ್ಸೆಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಯೆನಪೋಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಶೃತಿ ಟಿ. ಭಂಡಾರಿ ಹಾಗೂ ಡಾ. ಸೌಮ್ಯ ಸಿಂಗ್ ಅವರು ಕಾರ್ಡಿಯೋ ಪಲ್ಮರಿ ರೆಸ್ಕೊ (ಹೃದಯ ರಕ್ತನಾಳ ರಕ್ಷಿಸುವಿಕೆ) ಬಗ್ಗೆ ಪ್ರದರ್ಶನದ ಮೂಲಕ ವಿವರಿಸಿದರು. ಹಾಗೆಯೇ ಸಹಾಯಕ ಪ್ರಾಧ್ಯಾಪಕರಾದ ಡಾಕ್ಟರ್ ಉಮೇಮಾ, ಗರ್ಭಕೋಶ ಕಂಠದ ಕ್ಯಾನ್ಸರ್ಗಳ ಮತ್ತು ಸೆರವಿಕಲ್ ಕ್ಯಾನ್ಸರ್ಗಳ ಕಾರಣಗಳ ಪತ್ತೆ ಹಚ್ಚುವ ವಿಧಾನ ಹಾಗೂ ಚಿಕಿತ್ಸೆಯ ಬಗ್ಗೆ ವಿವರಿಸಿದರು.
ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕಿ ಪ್ರೊ. ಮಂಜುಳಾ ಶಾಂತರಾಮ್, ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ಡಾ. ಚಂದ್ರಶೇಖರ್ ಜಿ.ಜೋಶಿ, ಹೆಬ್ಬಾಲೆಯ ಪ್ರಾಥಮಿಕ ಅರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಭರತ್, ಜೀವರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಸ್. ಚಂದ್ರಶೇಖರಯ್ಯ, ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಸಂಯೋಜಕÀ ಡಾ. ಐ.ಕೆ. ಮಂಜುಳಾ, ಡಾ. ಗುಣಶ್ರೀ, ಯೋಗಿಕ್ ಸೈನ್ಸ್ ಸಂಯೋಜಕ ಡಾ. ಜೆ. ಶಾಮಾ ಸುಂದರ್, ವಿವಿಧ ವಿಭಾಗದ ಉಪನ್ಯಾಸಕರು, ಬೋಧಕ ವರ್ಗ, ತಾಂತ್ರಿಕ ವರ್ಗ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.