ಮಡಿಕೇರಿ, ಜ. 19: ಮೈಸೂರು ಜಿಲ್ಲೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳÀ ಜಾತ್ರಾ ಮಹೋತ್ಸವವು ತಾ. 21 ರಿಂದ 26ರ ವರೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು ಹಾಗೂ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಹೇಶ್, ಆರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವ ದಲ್ಲಿ ತಾ. 21 ರಂದು ವೀರಭದ್ರೇಶ್ವರ ಕೊಂಡೋತ್ಸವ, ತಾ. 23 ರಂದು ರಥೋತ್ಸವ, ತಾ. 24 ರಂದು ಮಹದೇಶ್ವರ ಕೊಂಡೋತ್ಸವ, ತಾ. 25 ರಂದು ತೆಪ್ಪೋತ್ಸವಗಳ ಜೊತೆಗೆ ಲಕ್ಷದೀಪೋತ್ಸವ, ಹಾಲ್ಹರವಿ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮ ಗಳು, ವೈವಿಧ್ಯಮಯ ಸಾಂಸ್ಕøತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆ ಗಳು ಜರುಗಲಿದೆಯೆಂದು ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಸುತ್ತೂರು ಶ್ರೀಕ್ಷೇತ್ರಕ್ಕೆ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆಯೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರಶೈವ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷರು ಹಾಗೂ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಕಾಂತರಾಜು, ಮಹಾಸಭಾದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಬಿ. ಹಾಲಪ್ಪ, ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾ ಖಜಾಂಚಿ ಡಿ.ಬಿ. ಸೋಮಪ್ಪ, ಶರಣ ಸಾಹಿತ್ಯ ಪರಿಷತ್‍ನ ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಮಹದೇವಪ್ಪ ಉಪಸ್ಥಿತರಿದ್ದರು.