ಮಡಿಕೇರಿ, ಜ. 19: ಗ್ರಾಹಕರು ತಮಗಿರುವ ಕಾನೂನುಗಳ ಬಗ್ಗೆ ಅರಿವಿಲ್ಲದೆ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು, ವಿದ್ಯಾರ್ಥಿ ದಿಸೆಯಲ್ಲಿಯೇ ಈ ಬಗ್ಗೆ ಅರಿತುಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಸಿ.ವಿ. ಮರಗೂರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಕುಶಾಲನಗರದ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆ-ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೂತನ ಗ್ರಾಹಕರ ರಕ್ಷಣಾ ಕಾಯ್ದೆ 2019 ಹಲವು ಬದಲಾವಣೆ ಗಳೊಂದಿಗೆ ಮತ್ತಷ್ಟು ಪರಿಣಾಮಕಾರಿ ಯಾಗಿದೆ. ಜನರನ್ನು ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡಿದರೂ ಸಹ ಅಂತಹವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಎ.ಎ. ಚಂಗಪ್ಪ ಮಾತನಾಡಿ, ಪ್ರತಿ ಬಾರಿಯೂ ವಸ್ತುಗಳನ್ನು ಖರೀದಿಸಲು ಹೋದಾಗ ಎಚ್ಚರಿಕೆಯಿಂದಿರಬೇಕು. ವ್ಯಾಪಾರಿಗಳು ಕೆಲವು ಬಾರಿ ಗ್ರಾಹಕರ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಾರೆ. ಕೆಲವರು ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುತ್ತಾರೆ. ಆಹಾರದಲ್ಲೂ ಸಹ ಕಲಬೆರಕೆ ಮಾಡುತ್ತಾರೆ. ಸಮಸ್ಯೆಗಳಾದರೆ ಕೂಡಲೇ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವಂತೆ ತಿಳಿಸಿದರು. ಗಾಳಿಬೀಡು ಪ್ರೌಢಶಾಲೆಯ ಶಿಕ್ಷಕ ರಮೇಶ್ ಮಾತನಾಡಿ, ಪ್ರತಿದಿನವೂ ಸಹ ನಾವು ಗ್ರಾಹಕರಾಗಿರುತ್ತೇವೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರಬೇಕು ಎಂದು ತಿಳಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ಡಿ.ಸಿ. ದೇವಕುಮಾರ್ ಮಾತನಾಡಿ, ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಕೊಂಡುಕೊಳ್ಳುವ ಮೊದಲು ಪರಿಶೀಲಿಸಿ ಎಂದು ತಿಳಿಸಿದರು.

ಇಲಾಖೆ ಅಧಿಕಾರಿ ಗಜೇಂದ್ರ ಎಡಕಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ, ಜಿಲ್ಲಾ ಗ್ರಾಹಕರ ಕೇಂದ್ರದ ಖಜಾಂಚಿ ಗಿರೀಶ್, ಕಾರ್ಯದರ್ಶಿ ಮೊಣ್ಣಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಕುಮಾರ್ ಇತರರು ಇದ್ದರು.