ಶನಿವಾರಸಂತೆ, ಜ. 19: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಪ್ರತಿ ವರ್ಷ ನಡೆಯುವ ಜಯದೇವ ಜಾನುವಾರು ಜಾತ್ರೆ ತಾ. 22 ರಂದು ಆರಂಭಗೊಳ್ಳಲಿದ್ದು, ಫೆ. 5ರವರೆಗೆ ನಡೆಯಲಿದೆ.

75 ವರ್ಷಗಳ ಹಿಂದೆ ಚಿತ್ರÀದುರ್ಗದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಸೋಮವಾರಪೇಟೆ ಬೇಳೂರು ಮಠಕ್ಕೆ ಭೇಟಿ ನೀಡಿದ್ದರು. ಆಗ ಇದೇ ಜಾತ್ರಾ ಮೈದಾನದಲ್ಲಿ ಅವರ ನೇತೃತ್ವದಲ್ಲಿ ವೀರ ಶೈವ ಧರ್ಮ ಸಮ್ಮೇಳನ ನಡೆದಿತ್ತು. ಆ ಸಮ್ಮೇಳನದ ನೆನಪಿಗಾಗಿ ಪ್ರತಿ ವರ್ಷ ಇಲ್ಲಿ ಜಾನುವಾರು ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ.

1943ರಲ್ಲಿ ಜಾತ್ರಾ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಿ ಉತ್ಸವವನ್ನು ಆರಂಭಿಸಲಾಯಿತು. ವರ್ಷಗಳು ಉರುಳಿದಂತೆ ಜಾತ್ರೆಗೆ ಕ್ರಮೇಣ ವಿವಿಧೆಡೆಯಿಂದ ಜಾನುವಾರುಗಳು ಬಂದು ಸೇರತೊಡಗಿದವು. ಜಿಲ್ಲೆಯಲ್ಲಿ ಮಾತ್ರವಲ್ಲದೇ ನೆರೆಯ ಹಾಸನ ಜಿಲ್ಲೆಯ ಅರಕಲಗೋಡು, ಗೊರೂರು, ಕಟ್ಟಾಯ, ಮಲ್ಲಿಪಟ್ಟಣ, ಮಗ್ಗೆ ಹಾಗೂ ಮೈಸೂರು ಜಿಲ್ಲೆಯಿಂದಲೂ ಅಧಿಕ ಪ್ರಮಾಣದಲ್ಲಿ ಜಾನುವಾರುಗಳು ವ್ಯಾಪಾರಕ್ಕೆಂದು ಬರತೊಡಗಿದವು ಅದಲ್ಲದೇ ಅಂಗಡಿ, ಹೊಟೇಲ್‍ಗಳಿಗೂ ಯಾವುದೇ ಸುಂಕ ವಿಧಿಸದೆ ಸಮಿತಿಯ ಸ್ವಂತ ವೆಚ್ಚದಲ್ಲಿ 15 ದಿನಗಳ ಕಾಲ ಜಾತ್ರ್ರಾ ಉತ್ಸವ ನಡೆಯುತಿತ್ತು, ಅಂದು ಸಚಿವರಾಗಿದ್ದ ಕಿತ್ತೂರಿನ ಕೆ. ಮಲ್ಲಪ್ಪ ಜಾತ್ರೆ ನಡೆಯುತ್ತಿದ್ದ ಸ್ಥಳವನ್ನು ಜಾತ್ರಾ ಮೈದಾನಕ್ಕೆಂದೇ ಮೀಸಲಿರಿಸಿದ್ದರು.

ಜಾತ್ರೆಯ ಮೊದಲ ದಿನ ಗುಡುಗಳಲೆ ಬಸವಣ್ಣ ದೇವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮಂಗಳ ವಾದ್ಯದೊಂದಿಗೆ ಜಾತ್ರಾ ಮೈದಾನಕ್ಕೆ ತಂದು ಪ್ರತಿಷ್ಠಾಪಿ ಸಲಾಗುತ್ತದೆ. ಶನಿವಾರಸಂತೆಯ ಸಮೀಪದ ಹಾರಳ್ಳಿ ಗ್ರಾಮದ ರಾಜವಂಶದ ಪ್ರಮುಖರೊಬ್ಬರು ಕೊಡಗಿನ ಕೊನೆಯ ರಾಜ ಚಿಕ್ಕವೀರರಾಜೇಂದ್ರನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು, ಅವರ ಕುಟುಂಬದವರು ಜಾತ್ರಾ ಮೈದಾನದ ದೀಣೆ ಮೇಲೆ ಬಸವೇಶ್ವರ ದೇವರ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ ಈಗಲೂ ಜಾತ್ರಾ ಮೈದಾನದ ಎರಡು ಬದಿಯಲ್ಲಿ ಎರಡು ಬಸವೇಶ್ವರರ ಪುಟ್ಟ ಗುಡಿಗಳಿವೆ. ಜಾತ್ರಾ ಸಮಯದಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ.

ಹಂಡ್ಲಿ ಗ್ರಾಮ ಪಂಚಾಯಿತಿಯ ಜಾತ್ರಾ ಸಮಿತಿಯ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ 15 ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಫೆ 5 ರಂದು ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

-ನರೇಶ್ಚಂದ್ರ, ಶನಿವಾರಸಂತೆ