ಕೂಡಿಗೆ, ಜ. 19: ಕೂಡುಮಂಗಳೂರು ಗ್ರಾಮ ಪಂಚಾಯತಿಯನ್ನು ಮೇಲ್ದರ್ಜೆಗೆ ಏರಿಸುವ ವಿಚಾರವಾಗಿ ಇಂದು ಕೂಡುಮಂಗಳೂರು ಗ್ರಾಮದ ಸಮುದಾಯ ಭವನದಲ್ಲಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯ ವಿಚಾರವಾಗಿ ಅನೇಕ ಚರ್ಚೆಗಳು ನಡೆದವು. ಸಭೆಯಲ್ಲಿ ಹಾಜರಿದ್ದ ಈ ವ್ಯಾಪ್ತಿಯ ಜನಪ್ರತಿನಿಧಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದರು.
ಸಭೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಸರಕಾರ ತುರ್ತು ಕ್ರಮ ತೆಗೆದು ಕೊಳ್ಳದಿದ್ದರೆ ಮುಂಬರುವ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಣಯ ತೆಗೆದು ಕೊಳ್ಳಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಅರ್. ಮಂಜಳಾ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಕುಮಾರ್, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಸಹಕಾರ ಸಂಘ ನಿರ್ದೇಶಕ ಕೆ.ಕೆ. ಭೋಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯೆ ಸಾವಿತ್ರಿರಾಜ್ ಸೇರಿದಂತೆ ಈ ವ್ಯಾಪ್ತಿಯ ಪ್ರಮುಖರು ವಿವಿಧ ಘಟಕಗಳ ಅಧ್ಯಕ್ಷರು, ಗ್ರಾಮಸ್ಥರು ಭಾಗವಹಿಸಿದ್ದರು.