ವೀರಾಜಪೇಟೆ, ಜ. 19: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಕ್ಕೆ ಬಳಸಿಕೊಂಡು ಆಕೆ ಗರ್ಭಿಣಿಯಾಗಲು ಕಾರಣನಾದ ವಿವಾಹಿತ ವಸಂತ (35) ಎಂಬಾತನಿಗೆ ಇಲ್ಲಿನ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಮಾ ಅವರು ಎರಡು ಆರೋಪಗಳಿಗೆ ಸಂಬಂಧಿಸಿದಂತೆ ತಲಾ 20 ವರ್ಷ ಸಜೆ (ಒಟ್ಟು 40ವರ್ಷ) ಹಾಗೂ ತಲಾ ರೂ. 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ ತಾ. 25.4.2019 ರಂದು ಬೊಳ್ಳುಮಾಡು ಗ್ರಾಮದ ರಮೇಶ್ ಎಂಬುವರ ಕಾಫಿ ತೋಟದ ಲೈನು ಮನೆಯಲ್ಲಿದ್ದ ವಸಂತ ಎಂಬಾತನು ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯೊಂದಿಗೆ ಅತ್ಯಾಚಾರವೆಸಗಿ ಗರ್ಭಿಣಿಯಾದ ಆರೋಪದ ಮೇರೆ ಅಪ್ರಾಪ್ತೆಯ ತಾಯಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರು. ಆ ಮೇರೆಗೆ ಪೊಲೀಸರು ವಸಂತನ ವಿರುದ್ಧ ಐ.ಪಿ.ಸಿ. 376 (ಐ) ಐ.ಪಿ.ಸಿ 4,5, (ಎಲ್) ಹಾಗೂ 6 ಪೋಕ್ಷೋ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಇಲ್ಲಿನ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಮಾ ಅವರು ಐ.ಪಿ.ಸಿ. 376 (ಐ) ಆರೋಪಕ್ಕೆ 20 ವರ್ಷ ಸಜೆ ಹಾಗೂ ರೂ 20,000 ದಂಡ, ನಂ 6 ಪೊಕ್ಸೋ ಕಾಯಿದೆ 376 (ಐ) ಆರೋಪಕ್ಕೂ 20 ವರ್ಷ ಸಜೆ, ರೂ. 20,000 ದಂಡ ವಿಧಿಸಿದ್ದಾರೆ. 20 ವರ್ಷಗಳ ಪ್ರತ್ಯೇಕ ಎರಡು ಸಜೆಯನ್ನು ಏಕ ಕಾಲದಲ್ಲಿ ಅನುಭವಿಸಬೇಕು. ದಂಡದ ರೂಪದಲ್ಲಿ ಬರುವ ರೂ 40 ಸಾವಿರ ಹಣದಲ್ಲಿ ರೂ. 30 ಸಾವಿರವನ್ನು ಸಂತ್ರಸ್ತಳಿಗೆ ಪಾವತಿಸುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ. ನಾರಾಯಣ ವಾದಿಸಿದ್ದರು.