ಸೋಮವಾರಪೇಟೆ, ಜ. 17: ತಾಲೂಕು ಒಕ್ಕಲಿಗರ ಯುವ ವೇದಿಕೆ ಮತ್ತು ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಫೆ. 8 ಮತ್ತು 9 ರಂದು ಪಟ್ಟಣದಲ್ಲಿ ಕಬಡ್ಡಿ ಹಬ್ಬ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ 3ನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಫೆ. 8 ರಂದು ಸಂಜೆ 3 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಪ್ರೋ ಕಬಡ್ಡಿ ಪಂದ್ಯಾವಳಿ ಮಾದರಿಯಲ್ಲಿ ಸುಸಜ್ಜಿತ ಅಂಕಣದಲ್ಲಿ ಪಂದ್ಯಾಟಗಳು ನಡೆಯಲಿವೆ. ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನಲ್ಲಿ ನೊಂದಾವಣೆಗೊಂಡಿರುವ 15 ತಂಡಗಳು ಭಾಗವಹಿಸಲಿವೆ. ಪ್ರೋ ಕಬಡ್ಡಿಯ ಆಟಗಾರರಾದ ಸುಖೇಶ್ ಹೆಗ್ಡೆ, ಪ್ರಶಾಂತ್ ರೈ, ಪವನ್ ಶೆರಾವತ್ ಮತ್ತಿತರ ಆಟಗಾರರು ಆಗಮಿಸಿ, ಕಬಡ್ಡಿ ಪ್ರಿಯರಿಗೆ ಆಟದ ರಸದೌತಣ ನೀಡಲಿದ್ದಾರೆ ಎಂದರು.
ಒಂದನೇ ಬಹುಮಾನ ರೂ. 1 ಲಕ್ಷ, 2ನೇ ಬಹುಮಾನ ರೂ. 75 ಸಾವಿರ, 3ನೇ ಬಹುಮಾನ ರೂ. 35 ಸಾವಿರ ಹಾಗೂ ಟ್ರೋಫಿಗಳನ್ನು ನೀಡಲಾಗುವದು. ಸ್ಥಳೀಯ ಕಬಡ್ಡಿ ಪ್ರತಿಭೆಗಳನ್ನು ಗುರುತಿಸಲು ಫೆ. 8 ಮತ್ತು 9 ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಜಿಲ್ಲೆಯ ತಂಡಗಳ ನಡುವಿನ ಪಂದ್ಯಾಟಗಳು ಇದೇ ಮೈದಾನದಲ್ಲಿ ನಡೆಯಲಿದ್ದು, ಫೈನಲ್ ಪ್ರವೇಶಿಸಿದ ತಂಡಗಳೊಂದಿಗೆ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶ ಮಾಡಿದ ತಂಡದೊಂದಿಗೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ತಿಳಿಸಿದರು.
ಈ ಪಂದ್ಯಾಟಕ್ಕೆ ಪ್ರತ್ಯೇಕ ಬಹುಮಾನ ನೀಡಲಾಗುವದು. ಫೆ. 6 ರೊಳಗೆ ಜಿಲ್ಲೆಯ ತಂಡಗಳು ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹೆಚ್.ಕೆ. ಪ್ರಸಿ (ಮೊ. 9448017660) ಕೆ.ಬಿ. ಸುರೇಶ್ (ಮೊ. 9448433294) ಅವರುಗಳನ್ನು ಸಂಪರ್ಕಿಸಬಹುದು ಎಂದರು. ಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ರಘು, ತಿಮ್ಮಯ್ಯ ಉಪಸ್ಥಿತರಿದ್ದರು.