ಗೋಣಿಕೊಪ್ಪ ವರದಿ, ಜ. 16: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮತ್ತಷ್ಟು ಜನಜಾಗೃತಿ ಮೂಡಿಸಲು ತಾ. 17 ರಂದು (ಇಂದು) ಮಡಿಕೇರಿಯಲ್ಲಿ ಆಯೋಜಿಸಿರುವ ಬಹಿರಂಗ ಸಭೆಗೆ ದೇಶಭಕ್ತರು ಪಾಲ್ಗೊಂಡು ಬೆಂಬಲ ಸೂಚಿಸುವದಾಗಿ ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಜಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಕಾಯ್ದೆಯ ಬಗ್ಗೆ ಇರುವ ಅನುಮಾನ ಗಳನ್ನು ಹೋಗಲಾಡಿಸಲು ದೇಶಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ.
ಇದರಂತೆ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಭೆ ನಡೆಸಿ ಜನರ ಗೊಂದಲ ನಿವಾರಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಮಂಡಲ ಕಾರ್ಯದರ್ಶಿ ಲಾಲಾ ಭೀಮಯ್ಯ, ಜಿ. ಪಂ. ಸದಸ್ಯ ಸಿ. ಕೆ. ಬೋಪಣ್ಣ, ಜಿಲ್ಲಾ ಕಾರ್ಯದರ್ಶಿ ಸುವಿನ್ ಗಣಪತಿ ಇದ್ದರು.
ಜಾಗೃತಿ ಸಭೆಗೆ ಬೆಂಬಲ
ಸುಂಟಿಕೊಪ್ಪ : ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು; ಇದನ್ನು ಬೆಂಬಲಿಸಿ ಕೊಡಗು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ತಾ. 17 ರಂದು (ಇಂದು) 10.30ಕ್ಕೆ ಮಡಿಕೇರಿ ಗಾಂಧಿ ಮೈದಾನದಲ್ಲಿ ಬೃಹತ್ ಬಹಿರಂಗ ಜನಜಾಗೃತಿ ಸಭೆ ನಡೆಯಲಿದೆ. ಬಿಜೆಪಿ ಘಟಕದ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಸಭೆಗೆ ಬೆಂಬಲಿಸುವದಾಗಿ ತಿಳಿಸಿದ್ದಾರೆ.