ಮಡಿಕೇರಿ, ಜ. 16: ಜಿಲ್ಲೆಯಾದ್ಯಂತ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆಯೊಂದಿಗೆ ಮನೆ ಮನೆಗಳಲ್ಲಿ ಜನತೆ ಎಳ್ಳುಬೆಲ್ಲ ಸವಿದು ಪರಸ್ಪರ ಶುಭಾಶಯ ಮಿನಿಮಯ ಮಾಡಿಕೊಂಡರು ಸಿಹಿ-ಖಾರ ಪೊಂಗಲ್ ಪಾಯಸ ಒಳಗೊಂಡ ಭೋಜನದೊಂದಿಗೆ ಸಂಭ್ರಮಿಸಿದರು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಸಂಕ್ರಾಂತಿ ಆಚರಣೆ ನಡೆಯಿತು. ಮುತ್ತಪ್ಪ ದೇವಾಲಯದ ಆವರಣದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅನ್ನದಾನ ನೆರವೇರಿತು. ಓಂಕಾರೇಶ್ವರ ದೇವಾಲಯ ಸೇರಿದಂತೆ ಹಲವೆಡೆ ಪೂಜಾಕೈಂಕರ್ಯದೊಂದಿಗೆ ಪ್ರಸಾದ ವಿತರಣೆ ನಡೆಯಿತು.
ಮಕರ ಜ್ಯೋತಿ ವೀಕ್ಷಣೆ
ಗೋಣಿಕೊಪ್ಪ ವರದಿ: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಇಲ್ಲಿನ ಕಿಲೇರಿ ಮುತ್ತಪ್ಪ ಮಠಪುರದಲ್ಲಿ ಅಯ್ಯಪ್ಪ ಸ್ವಾಮಿ ಮಕರಜ್ಯೋತಿ ವೀಕ್ಷಣೆ ಕಾರ್ಯಕ್ರಮ ಬುಧವಾರ ನಡೆಯಿತು.
ಶಬರಿಮಲೆಯಲ್ಲಿ ದರ್ಶನ ನೀಡಿದ ಕ್ಷಣವನ್ನು ಎಲ್‍ಇಡಿ ಪರದೆ ಮೂಲಕ ಅಯ್ಯಪ್ಪ ಭಕ್ತಾದಿಗಳಿಗೆ ಸಾಮೂಹಿಕವಾಗಿ ನೋಡಲು ಅವಕಾಶ ಮಾಡಿಕೊಡಲಾಯಿತು. ಸ್ಥಳೀಯ ನೂರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಯ್ಯಪ್ಪ ಸ್ಥಾನದ ಅರವಣ ಪಾಯಸವನ್ನು ಪ್ರಸಾದವಾಗಿ ನೀಡಲಾಯಿತು.
ಸಮಾಜದ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ದೀಪ ಹಚ್ಚಿ ಖುಷಿಪಟ್ಟರು. ಕೊಡಗು ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ಶರತ್‍ಕಾಂತ್, ಗೌ. ಭಾಸ್ಕರ್, ಎನ್‍ಎನ್‍ಡಿಪಿ, ಗೋಣಿಕೊಪ್ಪ ಘಟಕ ಅಧ್ಯಕ್ಷ ಕೆ. ಜೆ. ಜಯೇಂದ್ರನ್, ಕೆಎನ್‍ಎಸ್ ಗೋಣಿಕೊಪ್ಪ ಘಟಕ ಅಧ್ಯಕ್ಷ ಟಿ. ಜಿ. ಪವಿತ್ರನ್, ವಿಶ್ವಕರ್ಮ ಘಟಕ ಅಧ್ಯಕ್ಷ ಕೆ. ಎ. ವಿನೋದ್, ಕಾರ್ಯದರ್ಶಿ ಅರುಣ್‍ಕುಮಾರ್, ಖಜಾಂಜಿ ಸುಬ್ರಮಣಿ ಇದ್ದರು.
ಕೂಡಿಗೆ ವ್ಯಾಪ್ತಿಯಲ್ಲಿ
ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೂರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪ್ರದಾಯದಂತೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಈ ಅಂಗವಾಗಿ ಗ್ರಾಮಗಳಲ್ಲಿ ಮನೆ ಮುಂದೆ ವಿವಿಧ ಬಣ್ಣದ ರಂಗೋಲಿಯನ್ನು ಬಿಡಿಸಲಾಗಿತ್ತು. ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆಯನ್ನು ಧರಿಸಿ ಅಕ್ಕ ಪಕ್ಕದ ಮನೆಯವರಿಗೆ ಎಳ್ಳು ಬೆಲ್ಲ ನೀಡಿ ಸಂಕ್ರಾಂತಿಯ ಶುಭಾಶಯ ಕೋರಿದರು. ಗ್ರಾಮದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಕುಶಾಲನಗರ: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳ ಅಲ್ಲಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ನಡೆಯಿತು. ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಮಹಿಳೆಯರು, ಮಕ್ಕಳು ಹೊಸ ಬಟ್ಟೆ ತೊಟ್ಟು ನೆರೆಹೊರೆಯವರಿಗೆ, ಬಂಧುಗಳಿಗೆ ಎಳ್ಳು ಬೆಲ್ಲ ಬೀರುವ ಮೂಲಕ ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ವಾಸವಿ ಯುವಜನ ಸಂಘದ ವತಿಯಿಂದ ಸಂಕ್ರಾಂತಿ ಪ್ರಯುಕ್ತ ಸಾರ್ವಜನಿಕರಿಗೆ ಎಳ್ಳು-ಬೆಲ್ಲ ವಿತರಿಸಿದರು. ವಾಸವಿ ಯುವಜನ ಸಂಘದ ಅಧ್ಯಕ್ಷ ನಾಗ ಪ್ರವೀಣ್, ಕಾರ್ಯದರ್ಶಿ ಅರ್ಜುನ್ ಗುಪ್ತ, ರಾಜು, ಆದರ್ಶ, ವಿನಯ್, ವೈಶಾಖ್, ಶರಣ್ ಮತ್ತಿತರರು ರಥಬೀದಿಯ ವರ್ತಕರು ಸೇರಿದಂತೆ ಸಾರ್ವಜನಿಕರಿಗೆ ಎಳ್ಳುಬೆಲ್ಲ ವಿತರಿಸಿದರು.
ಶನಿವಾರಸಂತೆ: ಪಟ್ಟಣದ ಜನತೆ ಬುಧವಾರ ಮಕರ ಸಂಕ್ರಾಂತಿ ಹಬ್ಬವನ್ನು ಸೂರ್ಯದೇವನ ಪೂಜೆಯೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ನೂತನ ವರ್ಷದ ಮೊದಲ ಹಬ್ಬ, ಉತ್ತರಾಯಣ ಪುಣ್ಯಕಾಲ, ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿಹಬ್ಬ ಎಂದು ಕರೆಯಲ್ಪಡುವ ಸಂಕ್ರಾಂತಿ ಹಬ್ಬ ರೈತರ ಹಬ್ಬವಾಗಿದೆ. ಮುಂಜಾನೆ ಮನೆಯಂಗಳದಲ್ಲಿ ರಂಗೋಲಿ ಬಿಡಿಸಿ, ಬಾಗಿಲಿಗೆ ಮಾವಿನೆಲೆ ತೋರಣ ಕಟ್ಟಿ, ನೂತನ ವಸ್ತ್ರ ಧರಿಸಿದ ಜನತೆ ಮನೆದೇವರೊಂದಿಗೆ ಸೂರ್ಯದೇವನನ್ನು ಪೂಜಿಸಿದರು. ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮನೆಮನೆಯಲ್ಲೂ ಸಿಹಿ-ಖಾರ ಪೊಂಗಲ್ ಹಾಗೂ ಪಾಯಸದ ಘಮಘಮ, ಸಹಭೋಜನ ಸವಿದರು. ಸಂಜೆ ಮಹಿಳೆಯರು, ಹೆಣ್ಣುಮಕ್ಕಳು ಮನೆಮನೆಗೆ ತೆರಳಿ ಎಳ್ಳುಬೆಲ್ಲದೊಂದಿಗೆ ಕಿತ್ತಳೆ, ಕಬ್ಬು ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಪಟ್ಟಣದ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಾಲಯ, ಶ್ರೀರಾಮಮಂದಿರ, ವಿಜಯವಿನಾಯಕ ದೇವಾಲಯಗಳಲ್ಲಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.
ವೀರಾಜಪೇಟೆ: ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಕರ ಜ್ಯೋತಿ, ಸಂಕ್ರಾಂತಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಕರ ಸಂಕ್ರಾಂತಿ ಪ್ರಯುಕ್ತ ದೇವಾಲಯದಲ್ಲಿ ಬೆಳಗಿನಿಂದಲೇ ದೇವರಿಗೆ ವಿವಿಧ ರೀತಿಯ ಅಭಿಷೇಕಗಳು ವಿಶೇಷ ಪೂಜೆಗಳು ನೆರವೇರಿದವು.
ಸಂಜೆ 6.45ಗಂಟೆಗೆ ಮಕರಜ್ಯೋತಿ ಮಹಾ ಪೂಜಾ ಸೇವೆ ಜರುಗಿತು. ನಂತರ ರಾತ್ರಿ 7ಗಂಟೆಗೆ ಅಯ್ಯಪ್ಪ ಉತ್ಸವ ಮೂರ್ತಿಯಿಂದ ದೇವಾಲಯದ ಸುತ್ತ ಚಂಡೆ ಮೇಳದೊಂದಿಗೆ ನೃತ್ಯ ಪ್ರದರ್ಶನ ಅನಂತರ ವಿಶೇಷ ಪೂಜೆ ನಡೆಯಿತು.
ಹೆಮ್ಮೆತ್ತಾಳು : ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅಲ್ಲಿನ ಆದಂ ತೋಟದ ಒಳಗಡೆ ಇರುವ ಶ್ರೀ ಬೇಟೆ ಅಯ್ಯಪ್ಪ ದೇವಾಲಯದಲ್ಲಿ ಸೇರಿದ ಗ್ರಾಮಸ್ಥರು ಅಯ್ಯಪ್ಪನಿಗೆ ನಮಿಸಿ ಹಬ್ಬ ಆಚರಿಸಿದರು. ಇನ್ನೆಂದೂ ಪ್ರಕೃತಿ ವಿಕೋಪ ಉಂಟಾಗದೆ ನಾಡಿನ ಅಭಿವೃದ್ಧಿಯಾಗಲೆಂದು ಪ್ರಾರ್ಥಿಸಿದರು.
ದೇವಾಲಯದ ಅರ್ಚಕ ಶ್ರೀಕೃಷ್ಣ ಅವರು ಪೂಜಾ ಕಾರ್ಯ ನೆರವೇರಿಸಿದರು. ನೆರೆದಿದ್ದ ಭಕ್ತರಿಗೆ ಪ್ರಸಾದದೊಂದಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ತೋಟದ ವ್ಯವಸ್ಥಾಪಕ ಅಯ್ಯಪ್ಪ, ಅಯ್ಯಕುಟ್ಟಿರ, ಕುಡೆಕಲ್, ಕೊಂಬಂಡ, ಕೋಡಿಯಡ್ಕ, ಕಟ್ಟೆಮನೆ, ತೋರೆರ ಕುಟುಂಬಸ್ಥರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸುಂಟಿಕೊಪ್ಪ: ಇಲ್ಲಿನÀ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ಮಕರಸಂಕ್ರಾಂತಿ (ಪೊಂಗಲ್) ಹಬ್ಬದ ಪ್ರಯುಕ್ತ ಶ್ರದ್ಧಾ ಭಕ್ತಿಯಿಂದ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಬುಧವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಯಿತು. ಸುಂಟಿಕೊಪ್ಪ 1 ನೇ ವಿಭಾಗ ವಿಶ್ವನಾಥ ರೈ ಬಡಾವಣೆ, ಅಂಬೇಡ್ಕರ್ ಬಡಾವಣೆ, ಚಾಮುಂಡೇಶ್ವರಿ ಬಡಾವಣೆ ಪಾರ್ವತಮ್ಮ ಬಡಾವಣೆಯ ಜನತಾ ಬಡಾವಣೆ ಭಕ್ತರು ಪೂಜೆಯಲ್ಲಿ ಪಾಲ್ಗೋಂಡರು.ಹಬ್ಬದ ಪ್ರಯುಕ್ತ ತಮ್ಮ ತಮ್ಮ ಮನೆಗಳ ಅಂಗಳಗಳಲ್ಲಿ ರಂಗೋಲಿ ಬಿಡಿಸುವುದರ ಮೂಲಕ ಮಕರ ಸಂಕ್ರಾಂತಿ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಸೋಮವಾರಪೇಟೆ: ಸಂಕ್ರಾಂತಿಯನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆಗಳು ನಡೆದವು. ಪರಸ್ಪರ ಎಳ್ಳುಬೆಲ್ಲ ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಕ್ರಾತಿ ಹಬ್ಬ ಹಾಗೂ ಶಾಂತಳ್ಳಿ ಕುಮಾರಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಕೂತಿ ಗ್ರಾಮದ ಸಬ್ಬಮ್ಮ ದೇವರ ಕಟ್ಟೆಯಲ್ಲಿ ಗ್ರಾಮದ ಒಕ್ಕಲಿಗ ಮನೆತನದ ದೇವರ ಪಟ್ಟವನ್ನು ಇಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಪಟ್ಟವನ್ನು ಹೊತ್ತ ಮಹಿಳೆಯರು ಹಾಗೂ ಪುರುಷರು ಕಟ್ಟೆ ಸುತ್ತ ಪ್ರದಕ್ಷಿಣೆ ಹಾಕಿ, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯಕ್ಕೆ ತೆರಳಿ ಜಾತ್ರೋತ್ಸವದಲ್ಲಿ ಭಾಗಿಯಾದರು.
ಈ ಸಂದರ್ಭ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎ.ಪರಮೇಶ್, ಪದಾಧಿಕಾರಿಗಳಾದ ದಿವಾಕರ್, ಪ್ರಸನ್ನ, ಪ್ರದೀಪ್, ಕುಮಾರ್, ದಯಾನಂದ್ ಸೇರಿದಂತೆ ಇತರರು ಭಾಗಿಯಾಗಿದ್ದರು.
ಭಾಗಮಂಡಲ : ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮ ಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಭಾಗಮಂಡಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕೊಡವರಿಗೆ ಅಗಸ್ತ್ಯ ಮಹರ್ಷಿ ಹಾಗೂ ಅಮ್ಮಕೊಡವರಿಗೆ ಕಾವೇರಮ್ಮನ ಶಾಪವಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಿದ್ದು ಇದರ ವಿಮೋಚನೆಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಕೊಡವರು ಹಾಗೂ ಅಮ್ಮಕೊಡವರು ಸೇರಿ ಯಜುಸಂಹಿತಾ ಯಾಗವನ್ನು ಮಾಡಬೇಕೆಂದು ಪ್ರಶ್ನೆಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಟ್ರಸ್ಟಿನ ಅಧ್ಯಕ್ಷ ಬಿದ್ದಂಡ ಬಿ. ದೇವಯ್ಯ ಹೇಳಿದರು.
ಮಕರ ಸಂಕ್ರಾಂತಿಯಂದು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದ ಬಯಲು ಪ್ರದೇಶದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ ಹಾಗೂ ಶತರುದ್ರ ಪಠಣ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯದರ್ಶಿ ಮುಕ್ಕಾಟಿರ ಎ. ನಾಣಯ್ಯ, ಜಂಟಿ ಕಾರ್ಯದರ್ಶಿ ಚೆಯ್ಯಂಡ ಸತ್ಯ, ನಿರ್ದೇಶಕ ನಾಯಕಂಡ ಕೆ. ಅಯ್ಯಣ್ಣ, ಪ್ರಮುಖರಾದ ಸುನಿಲ್ ಸುಬ್ರಮಣಿ, ರವಿ ಚಂಗಪ್ಪ, ಚೆಪ್ಪುಡಿರ ಪೊನ್ನಪ್ಪ, ಎಂ.ಬಿ.ದೇವಯ್ಯ ಸೇರಿದಂತೆ ಅಧಿಕ ಗ್ರಾಮಸ್ಥರು ಪಾಲ್ಗೊಂಡಿದ್ದರು.