ಮಡಿಕೇರಿ, ಜ. 17: ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕೊಡವ ಕೇರಿಯ 13ನೇ ವರ್ಷದ ಮಹಾಸಭೆ ಕೊಡವ ಕೇರಿಯ ಅಧ್ಯಕ್ಷೆ ಪಳಂಗಂಡ ರೇಖಾ ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ರೇಖಾ ತಮ್ಮಯ್ಯ, ಕೇರಿಯ ಜನತೆಯ ಎಲ್ಲ ಕಷ್ಟ ಸುಖಗಳಿಗೂ ಪರಸ್ಪರರು ಪಾಲ್ಗೊಂಡು ಒಬ್ಬರಿಗೊಬ್ಬರು ಸಹಕರಿಸಬೇಕೆಂದು ಹೇಳಿದರು. ಕೇರಿಯ ಜನ ಕೊಡವ ಸಾಂಸ್ಕøತಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ಭಾಗವಹಿಸುವಂತಾಗಬೇಕೆಂದು ಕೋರಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡವ ಕೇರಿಯ ಮಾಜಿ ಕಾರ್ಯದರ್ಶಿ ಮುಂಡಂಡ ಕಾವೇರಪ್ಪ ಮಾತನಾಡಿ, ಪ್ರಾರಂಭಗೊಂಡು 13 ವರ್ಷವಾಗಿರುವ ನಮ್ಮ ಕೇರಿ ಈಗ ಹೆಚ್ಚಿನ ಸದಸ್ಯತ್ವವನ್ನು ಹೊಂದಿರುವುದು ಸ್ವಾಗತಾರ್ಹ. ಬೇರೆ ಕೊಡವ ಕೇರಿಯಂತೆ ನಮ್ಮ ಕೇರಿಯೂ ಕೂಡ ಮುಂದಿನ ದಿನಗಳಲ್ಲಿ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಆಗಲಿ ಎಂದು ಆಶಿಸಿದರು.

ಮಹಾಸಭೆ ಅಂಗವಾಗಿ ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆದವು. ಚೊಟ್ಟಂಡ ದೇಚಮ್ಮ ಪ್ರಾರ್ಥಿಸಿ, ಕಾರ್ಯದರ್ಶಿ ಬೋಳಪಂಡ ವಿಜಯ ಲೆಕ್ಕ ಮಂಡನೆ ಮಾಡಿದರು. ಬೊಳ್ಳಜಿರ ಬಿ. ಅಯ್ಯಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ನೂತನ ಆಡಳಿತ ಮಂಡಳಿ: 2020-2021 ರಿಂದ 2022-2023 ವರೆಗಿನ (ಮುಂದಿನ ಮೂರು ವರ್ಷಗಳ ಅವಧಿಗೆ) ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬೋಡಂಡ ಮುತ್ತಪ್ಪ, ಉಪಾಧ್ಯಕ್ಷರಾಗಿ ಪಳಂಗಂಡ ರೇಖಾ ತಮ್ಮಯ್ಯ, ಕಾರ್ಯದರ್ಶಿಯಾಗಿ ಬೋಳಪಂಡ ವಿಜಯ, ನಿರ್ದೇಶಕರಾಗಿ ಮಂದನೆರವಂಡ ಸಂಜು ಅಚ್ಚಯ್ಯ, ಪೂಳಂಡ ಮಧು, ಮುಂಡಂಡ ಸುನೀಲ್ ನಂಜಪ್ಪ, ಮಂಡೆಪಂಡ ಬೋಪಣ್ಣ, ಪುದಿಯತಂಡ ಅಪ್ಪಯ್ಯ, ಓಡಿಯಂಡ ಕಾರ್ಯಪ್ಪ ಹಾಗೂ ಬಾಳೆಯಡ ಮೀನಾ ಆಯ್ಕೆಯಾದರು.