ಸುಂಟಿಕೊಪ್ಪ: ವಿದ್ಯಾರ್ಥಿಯು ತನ್ನ ಜೀವನ ನಿರ್ವಹಣೆಗೆ, ಭೂಮಿಕೆ ಒದಗಿಸುವಂತಹ, ಅಧ್ಯಯನ ವಿಷಯಗಳನ್ನು ಆಯ್ಕೆ ಮಾಡಿಕೊಂಡರೆ ತಾನು ಪಡೆದ ಶಿಕ್ಷಣ ಸದುಪಯೋಗವಾಗುತ್ತದೆ ಎಂದು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ರಸಾಯನ ಶಾಸ್ತ್ರ ಉಪನ್ಯಾಸಕ ಈಶ ನುಡಿದರು.

ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.

‘ಪಿಯುಸಿ ನಂತರ ಮುಂದೇನು?’ ಎನ್ನುವ ಚಿಂತೆಯನ್ನು ತೊರೆಯಬೇಕಿದೆ. ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಅವಶ್ಯಕತೆಯಿದೆ. ಈ ಕಾರ್ಯಕ್ರಮದ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಈಶ ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಬೇರಿಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಸನ್, ವಿನುತ ಹಾಗೂ ವಿನಯ್ ಇವರಿಂದ ಪಿಯುಸಿ ನಂತರ ವಿದ್ಯಾರ್ಥಿಗಳು ತಾಂತ್ರಿಕ ಪದವಿಗೆ ದಾಖಲಾಗಲು ಸಾಮಾನ್ಯ ಪ್ರವೇಶ ಪರೀಕ್ಷೆ ಹೇಗೆ ಎದುರಿಸಬೇಕು ಎಂದು ಸಮಗ್ರವಾಗಿ ವಿವರಿಸಲಾಯಿತು. ಇಂಜಿನಿಯರಿಂಗ್ ವಿಷಯಗಳಲ್ಲಿ ಬರುವ ನೂರಾರು ಬೇರೆ ಬೇರೆ ಅಧ್ಯಯನ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ವಹಿಸಿದ್ದರು. ಕಾಲೇಜು ಉಪನ್ಯಾಸಕಿ ಜಯಶ್ರೀ ವಿದ್ಯಾರ್ಥಿಗಳಿಗೆ ಮಾಹಿತಿ ಪತ್ರ ವಿತರಿಸಿದರು.

ಮಡಿಕೇರಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಯುವ ಸಂಸತ್ ಸ್ಫರ್ಧೆಯಲ್ಲಿ ನಗರದ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ಬಿ.ಹೆಚ್. ಅಭಿಷೇಕ್ ರಾಜ್ಯಕ್ಕೆ ದ್ವಿತೀಯ ಮತ್ತು ಪಿ. ಹರಿಪ್ರಸಾದ್ 10ನೇ ಸ್ಥಾನಗಳಿಸಿದ್ದಾರೆ.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಕನಗವಲ್ಲಿ ಬಹುಮಾನ ವಿತರಿಸಿದರು. ಈ ವಿದ್ಯಾರ್ಥಿಗಳಿಗೆ ಸರಕಾರಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಎನ್.ಎಸ್. ಚಿದಾಂನಂದ ಮಾರ್ಗದರ್ಶನ ನೀಡಿದ್ದಾರೆ.

ವೀರಾಜಪೇಟೆ: ಕಾಲೇಜು ಹಂತ ವಿದ್ಯಾರ್ಥಿ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ಈ ಹಂತದಲ್ಲೇ ವಿದ್ಯಾರ್ಥಿ ತನ್ನ ಗುರಿ ಮತ್ತು ಉದ್ದೇಶಗಳನ್ನು ಬೆಳೆಸಿಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಡಾ. ಕೆ.ಎಂ. ಭವಾನಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಬದುಕಿನಲ್ಲಿ ಗುರಿ ಮತ್ತು ಉದ್ದೇಶಗಳು ಇದ್ದಾಗ ಮಾತ್ರ ಉತ್ತಮ ಸಾಧನೆ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್, ವಿದ್ಯಾರ್ಥಿಗಳಿಗೆ ವಿವೇಚನಾ ಶಕ್ತಿ ಅಗತ್ಯ. ತಪ್ಪು ಸರಿಗಳನ್ನು ಯೋಚಿಸಿ ತೀರ್ಮಾನ ತೆಗೆದುಕೊಂಡು ಬೆಳೆದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಸದಸ್ಯೆ ಆಶಾ ಸುಬ್ಬಯ್ಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕನ್ನಡ ಭಾಷಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಕೆ.ಬಿ. ಗೌರಿ ಕಾಲೇಜು ವರದಿ ವಾಚಿಸಿದರು. ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಎಂ. ದಿನೇಶ್ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವರದಿ ಮಂಡಿಸಿದರು.

ವೇದಿಕೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಕೆ.ಕೆ. ಅಂಬುಜ, ಪೋಷಕ ಸದಸ್ಯರಾದ ಬಿ.ಎಂ. ದಿನೇಶ್ ಇನ್ನಿತರರು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರುಗಳಾದ ರೀಟಾ ಐರಿಸ್ ಆಳ್ವಾರಿಸ್, ಆರ್. ವಿನೋದ್ ಕುಮಾರ್, ಹೆಚ್.ಆರ್. ದಮಯಂತಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಈ ಸಂದರ್ಭ ವಿವಿಧ ಸಾಂಸ್ಕತಿಕ, ಕಲಿಕಾ, ಪಠ್ಯೇತರ ಚಟುವಟಿಕೆ, ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ಅರ್ಥಶಾಸ್ತ್ರ ಉಪನ್ಯಾಸಕ ಅಂತೋಣಿ ವಿವಿಯನ್ ಆಳ್ವಾರಿಸ್ ಸ್ವಾಗತಿಸಿದರೆ, ಕನ್ನಡ ಭಾಷಾ ಉಪನ್ಯಾಸಕ ಎಂ. ದಿನೇಶ್ ಕಾರ್ಯಕ್ರಮ ನಿರೂಪಿಸಿ, ರಾಜ್ಯಶಾಸ್ತ್ರ ಉಪನಾಸಕಿ ಪವಿತ್ರಾ ಕುಮಾರಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ವೀರಾಜಪೇಟೆ: ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾದ ಕೆಲಸ ನಿರ್ವಹಿಸುತ್ತಿವೆ. ಈ ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆ ಅಮೂಲ್ಯವಾದುವುಗಳಾಗಿವೆ ಎಂದು ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬೀಳಗಿ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಬ್ರೈಟ್ ವಿದ್ಯಾಸಂಸ್ಥೆಯ 20ನೇ ವಾರ್ಷಿಕೋತ್ಸವ “ಬ್ರೈಟ್ ಫೆಸ್ಟ್-2020”ನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ನೀಡುವ ಫಲಿತಾಂಶ ಮಾತ್ರ ಮಾನದಂಡವಲ್ಲ, ಬದಲಾಗಿ ಮಕ್ಕಳಿಗೆ ಉತ್ತಮ ಚಾರಿತ್ರ್ಯ ಹಾಗೂ ಮೌಲ್ಯಗಳನ್ನು ನೀಡಿದಲ್ಲಿ ಅದು ಪ್ರಮುಖವೆನಿಸುತ್ತದೆ. ಬದುಕಿನ ಕೊನೆಯವರೆಗೂ ಒಬ್ಬ ಮನುಷ್ಯ ಪರೋಕ್ಷವಾಗಿ ವಿದ್ಯಾರ್ಥಿಯಾಗಿರುತ್ತಾನೆ. ಆದರೆ ಅವನು ಮೊದಲ ಪಾಠವನ್ನು ಅರಿತ ಶಿಕ್ಷಣ ಸಂಸ್ಥೆ ಅವನಿಗೆ ಎಂದೂ ನೆಚ್ಚಿನದ್ದು ಆಗಿರುತ್ತದೆ. ಶಿಕ್ಷಣದ ಮೂಲಕ ಏನನ್ನು ಕಲಿಯುತ್ತೀರೋ ಅದನ್ನು ಮೌಲ್ಯದೊಂದಿಗೆ ಬೆಸೆಯಬೇಕು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಪರಿಸರ ತಜ್ಞ ಡಾ. ಎಸ್.ವಿ. ನರಸಿಂಹನ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮಗೂ ಮುಂದಿನ ಪೀಳಿಗೆಗೂ ಬದುಕಲು ಅನುಯೋಜ್ಯವಾದ ಪರಿಸರವನ್ನು ನಿರ್ಮಾಣ ಮಾಡುವಲ್ಲಿ ಶ್ರಮಪಡಬೇಕು. ಪರಿಸರ ಉಳಿದರೆ ಮಾತ್ರ ಮನುಷ್ಯನ ಉಳಿವು ಎಂಬದನ್ನು ಅರಿತಿರಬೇಕು ಎಂದರು.

ಮಡಿಕೇರಿಯ ವಕೀಲ ಕೆ.ಎಂ. ಕುಂಞÂ ಅಬ್ದುಲಾ ಮಾತನಾಡಿ, ಶಿಕ್ಷಣದಲ್ಲಿ ಲೌಕಿಕ ಮತ್ತು ಧಾರ್ಮಿಕ ಎಂಬ ಬೇಧ ಇರಕೂಡದು. ಶಿಕ್ಷಣದಲ್ಲಿ ನೈತಿಕತೆಯನ್ನು ಅಳವಡಿಸಿದಲ್ಲಿ ಮಾತ್ರ ಅದು ಪೂರ್ಣತೆಯನ್ನು ಹೊಂದುತ್ತದೆ ಎಂದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಕಾಳಪ್ಪ ಈ ಸಂದರ್ಭ ಮಾತನಾಡಿ, ವಿದ್ಯಾರ್ಥಿಗಳಿಗೆ ಹಿರಿಯರ ಮಾರ್ಗದರ್ಶನ ಅತಿ ಅಗತ್ಯ. ವಿದ್ಯಾರ್ಥಿಗಳು ಹಿರಿಯರಿಗೆ ಮತ್ತು ಗುರುಗಳಿಗೆ ಮಹತ್ತರ ಸ್ಥಾನ ನೀಡಬೇಕು. ಪ್ರಸಕ್ತ ದಿನಗಳ ಕೆಡುಕುಗಳನ್ನು ವಿವೇಚನಾ ಬುದ್ಧಿಯಿಂದ ವೀಕ್ಷಿಸಿ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಎಸ್.ಹೆಚ್. ಮತೀನ್, ಕೆ.ಹೆಚ್. ಮುಹಮ್ಮದ್ ರಾಫಿ, ಅಗಸ್ಟಿನ್ ಬೆನ್ನಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಪೋಷಕರೂ ಇಸ್ಲಾಮಿಕ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷರೂ ಆದ ಕೆ.ಪಿ. ಕುಂಞÂ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಟಿ. ಬಷೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಮುಹಮ್ಮದ್ ಶಫೀಖ್ ಶಾಲಾ ವರದಿ ಮಂಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವ ವಿತರಿಸಲಾಯಿತು. ನವ್ಯಾ ಹಾಗೂ ತಂಗಮ್ಮ ಬಹುಮಾನ ವಿತರಿಸಿದರು. ವಿದ್ಯಾರ್ಥಿನಿ ಝಿಯಾ ಲಾಝಿಮ್ ಸ್ವಾಗತಿಸಿದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ಮಾತನಾಡಿ, ಇಂದಿಗೂ ಯುವಜನತೆಗೆ ಸ್ವಾಮಿ ವಿವೇಕಾನಂದರು ಆದರ್ಶ ಎಂದರು. ಉಪನ್ಯಾಸಕಿ ರುಹಿನ ಪರ್ವಿನ್ ವಿವೇಕಾನಂದರ ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಬಿಟಿಸಿಜಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶರಣ್ ಉದ್ಘಾಟಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಪ್ರವೀಣ್‍ಕುಮಾರ್, ಧನಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಮೂರ್ನಾಡು: ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಉನ್ನತ ಗುರಿ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮೀಷನರ್ ದೇವಣಿರ ಪ್ರೀತ್ ಗಣಪತಿ ಹೇಳಿದರು.

ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಕಮಲು ಮುದ್ದಯ್ಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದ ಸಮಯವನ್ನು ತಪಸ್ಸು ಮಾಡುವ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಪರಿಶ್ರಮಕ್ಕೆ ಪರ್ಯಾಯ ಮಾರ್ಗವಿಲ್ಲ. ಯುವಜನಾಂಗ ನಮ್ಮ ದೇಶದ ಮುತ್ತು ರತ್ನಗಳಾಗಿದ್ದು, ಇಂತಹ ವಿದ್ಯಾರ್ಥಿಗಳ ಹೆಗಲ ಮೇಲೆ ದೇಶವು ನಿಂತಿದೆ ಎಂದು ತಿಳಿಸಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮೂಕೋಂಡ ಕೆ. ಗಣಪತಿ ಮಾತನಾಡಿ, ಇಂಟರ್‍ನೆಟ್, ಮೊಬೈಲ್‍ಗಳನ್ನು ಮನೋರಂಜನೆಗಾಗಿ ಬಳಸದೆ, ರಚನಾತ್ಮಕವಾಗಿ, ಜ್ಞಾನ ವಿಕಾಸಕ್ಕಾಗಿ ಉಪಯೋಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಮಾತನಾಡಿ, ಈ ವಿದ್ಯಾಸಂಸ್ಥೆಯು ನಡೆದು ಬಂದ ಹಾದಿಯ ಬಗ್ಗೆ ವಿವರಣೆ ನೀಡಿದರು. ವಿದ್ಯಾಸಂಸ್ಥೆಗೆ ನೆರವು ನೀಡಿದ ಹಲವಾರು ದಾನಿಗಳನ್ನು ಈ ಸಂದರ್ಭ ನೆನಪಿಸಿಕೊಂಡರು. ವೇದಿಕೆಯಲ್ಲಿ ದೇವಣಿರ ಕೌಶಿಕ್ ಕಾರ್ಯಪ್ಪ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕ ನಂದೇಟಿರ ರಾಜಾ ಮಾದಪ್ಪ, ಎ.ಎಂ. ಶೈಲಾ, ಈರಮಂಡ ಸೋಮಣ್ಣ, ಪಳಂಗಂಡ ವಿಠಲ್ ಪೂವಯ್ಯ, ಪಿ.ಎ. ಸುಶೀಲಾ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎ.ಎಸ್. ರಶ್ಮಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಎಸ್.ಡಿ. ಪ್ರಶಾಂತ್ ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಎಲ್‍ಕೆಜಿಯಿಂದ ಪದವಿ ಕಾಲೇಜಿನವರೆಗಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಮಾರಂಭಕ್ಕೆ ಮೊದಲು ಪದವಿ ಕಾಲೇಜಿನ ಪ್ರಾಂಗಣದಲ್ಲಿ ಕಟ್ಟಡ ದಾನಿಗಳಾದ ದಿ. ಬಾಚೆಟ್ಟಿರ ಲಾಲು ಮುದ್ದಯ್ಯ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಪೂಜೆಯನ್ನು ನೆರವೇರಿಸಲಾಯಿತು. ವಿದ್ಯಾಸಂಸ್ಥೆಯ ಎನ್‍ಸಿಸಿ ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನ ವೀಕ್ಷಿಸಿದ ಮುಖ್ಯ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು. ಕೊನೆಯಲ್ಲಿ ಜರುಗಿದ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ವಿದ್ಯಾರ್ಥಿನಿ ಶ್ರೀರಕ್ಷ ತಂಡದವರು ಪ್ರಾರ್ಥಿಸಿ, ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಸ್ವಾಗತಿಸಿ, ಸಾದೇರ ದರ್ಶನ್ ಮಾದಪ್ಪ ಮತ್ತು ಕುಮುದ ಕಾರ್ಯಕ್ರಮ ನಿರೂಪಿಸಿ, ಎಸ್.ಡಿ. ಪ್ರಶಾಂತ್ ವಂದಿಸಿದರು.