ಮಡಿಕೇರಿ, ಜ. 14: ಅಳಿವಿನಂಚಿನಲ್ಲಿರುವ ಭಾಷೆಗಳಲ್ಲೊಂದಾದ ಕೊಡವ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಮಾರ್ಗಸೂಚಿಯ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ವೇಣುಗೋಪಾಲ್ ಹಾಗೂ ರಿಜಿಷ್ಟ್ರಾರ್ ಬಿ.ಕೆ. ರವಿ ಅವರನ್ನು ಕೊಡವಾಮೆರ ಕೊಂಡಾಟ ಕೂಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಉಪಾಧ್ಯಕ್ಷ ಬಟ್ಟಕಾಳಂಡ ಮುತ್ತಣ್ಣ ಅವರು ಭೇಟಿಯಾಗಿ ಚರ್ಚಿಸಿದರು.
ಕುಲಸಚಿವರು ಹಾಗೂ ರಿಜಿಷ್ಟ್ರಾರ್ ಅವರು ಕೊಡವ ಜನಾಂಗ ಹಾಗೂ ಭಾಷೆಯು ಅಪಾಯದಲ್ಲಿದ್ದು, ಇದರ ಬೆಳವಣಿಗೆಯ ಸಮಗ್ರ ಅಧ್ಯಯನ ಹಾಗೂ ದಾಖಲೀಕರಣದ ಅವಶ್ಯವಿದ್ದು, ಇದಕ್ಕಾಗಿ ಬೆಂಗಳೂರು ವಿಶ್ವ ವಿದ್ಯಾನಿಲಯವು ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಜನಾಂಗದ ಹೆಚ್ಚಿನ ವಿದ್ಯಾರ್ಥಿಗಳು ಈ ಕುರಿತ ಅಧ್ಯಯನ ನಡೆಸುವಂತಾಗಬೇಕೆಂದು ಸಲಹೆ ನೀಡಿದರು.