ಕೂಡಿಗೆ, ಜ. 14: ಸೋಮವಾರಪೇಟೆ ತಾಲೂಕಿನ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಹಾಡಿಗಳ ಜನರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರದ ಹೊಸ ಯೋಜನೆಯ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ 444 ಮನೆಗಳ ನಿರ್ಮಾಣ ಕಾರ್ಯ ನಡೆದಿದೆ.

ಈ ಸಾಲಿನಲ್ಲಿ 444 ಮನೆಗಳ ಫಲಾನುಭವಿಗಳ ಆಯ್ಕೆ ನಡೆದಿದ್ದು, ಶೇ. 90 ರಷ್ಟು ಮನೆಗಳ ನಿರ್ಮಾಣ ಕಾರ್ಯ ಮುಗಿದಿದೆ. ಇನ್ನೂ 72 ಮನೆ ನಿರ್ಮಾಣ ಬಾಕಿ ಇದೆ. ಈ ಮನೆಯ ನಿರ್ಮಾಣಕ್ಕೆ ಇಲಾಖೆಯ ವತಿಯಿಂದ ರೂ. 3.5 ಲಕ್ಷ ಹಣವನ್ನು ನೀಡಲಾಗಿದೆ. ಅಲ್ಲದೆ ಹಳೆ ಮನೆ ರೀಪೇರಿಗೆ ರೂ. 2 ಲಕ್ಷಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಹಾಡಿಗಳಿಗೆ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಗಿರಿಜನ ಯೋಜನಾ ಸಮನ್ವಯ ಅಧಿಕಾರಿ ಟಿ.ಡಿ. ಶೇಖರ್ ತಿಳಿಸಿದರು. ಕೆಲವು ಹಾಡಿಗಳಿಗೆ ಭೇಟಿ ನೀಡಿ ಮನೆ ನಿರ್ಮಾಣದ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.