ಕೂಡಿಗೆ, ಜ. 14: ಜಿಲ್ಲೆಯಲ್ಲೇ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ಹಾಗೂ ಪಟ್ಟಣ ಪಂಚಾಯಿತಿ ಆಗುವಂತಹ ಜನಸಂಖ್ಯೆಯನ್ನು ಹೊಂದಿರುವ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆ ಗೇರಿಸಬೇಕೆಂದು ಕೂಡುಮಂಗಳೂರು ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿಯು 24 ಸದಸ್ಯರನ್ನು ಹೊಂದಿದ್ದು, 10,000ಕ್ಕೂ ಹೆಚ್ಚು ಮತದಾರರಿದ್ದಾರೆ. ಕೂಡು ಮಂಗಳೂರು, ಬಸವನತ್ತೂರು, ವಿಜಯನಗರ, ದೊಡ್ಡತ್ತೂರು, ಚಿಕ್ಕತ್ತೂರು, ಹಾರಂಗಿ ವ್ಯಾಪ್ತಿಯನ್ನೊಳಗೊಂಡಿದೆ.

ಈ ವ್ಯಾಪ್ತಿಗೆ ಕೂಡಿಗೆಯ ಕೃಷಿ ಫಾರಂ, ಸೈನಿಕ ಶಾಲೆ, ಕ್ರೀಡಾಶಾಲೆ, ಕೃಷಿ ಕ್ಷೇತ್ರದ ಆವರಣದಲ್ಲಿರುವ ಹತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, ಜಿಲ್ಲೆಯಲ್ಲೇ ಪ್ರಮುಖವಾದ ಕೈಗಾರಿಕಾ ಘಟಕವನ್ನು ಕೂಡ್ಲೂರು ಗ್ರಾಮ ಹೊಂದಿದೆ.

ಇದೀಗ ಈ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿಸಲು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುವು ದರೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಪತ್ರ ವ್ಯವಹರಿಸಲು ಹಿತರಕ್ಷಣಾ ವೇದಿಕೆ ತೀರ್ಮಾನಿಸಿದೆ.

ಇದಕ್ಕೆ ಪೂರಕವಾಗಿ 2010 ರಲ್ಲಿ ಕೈಗಾರಿಕಾ ಪ್ರದೇಶದ ಸಮೀಕ್ಷೆಯ ಸಂದರ್ಭ ಪಂಚಾಯಿತಿಯನ್ನಾಗಿಸಲು ಆಗಿನ ಜಿಲ್ಲಾಧಿಕಾರಿಯವರು ಸೂಚಿಸಿರುವುದು ತಿಳಿದು ಬಂದ ಹಿನ್ನೆಲೆ ಇದೀಗ ಹಿತ ರಕ್ಷಣಾ ವೇದಿಕೆಯು ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿಸಬೇಕು ಎಂದು ಒತ್ತಾಯಿಸಿದೆ.