ಮಡಿಕೇರಿ, ಜ. 13: ವಾಹನ ಚಾಲಕರು ಅಗತ್ಯ ದಾಖಲೆ ಗಳೊಂದಿಗೆ ಸಂಚಾರಿ ನಿಯಮವನ್ನು ಪಾಲಿಸಬೇಕೆಂದು ನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಬೆಳ್ಳಿಯಪ್ಪ ಸಲಹೆ ನೀಡಿದ್ದಾರೆ.
ನಗರದಲ್ಲಿ ನಡೆದ ಮಡಿಕೇರಿ ಶಾಲಾ ವಾಹನ ಚಾಲಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಾಲಕರು ಅನಾರೋಗ್ಯಕರ ವೇಗದ ಪೈಪೋಟಿಗೆ ಆದ್ಯತೆ ನೀಡದೆ ಸುರಕ್ಷತೆ ಬಗ್ಗೆ ಗಮನ ಹರಿಸಬೇಕೆಂದರು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತಿವೇಗ, ದಾಖಲೆ ರಹಿತ ಚಾಲನೆ ಸೇರಿದಂತೆ ಸಂಚಾರಿ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಚಾಲಕರ ಸಂಘದ ಪದಾಧಿಕಾರಿಗಳ ಮಾಹಿತಿಯನ್ನು ಸಲ್ಲಿಸಿ ಕಾನೂನು ಬದ್ಧವಾಗಿ ಸಂಘವನ್ನು ಮುನ್ನಡೆಸು ವಂತೆ ಬೆಳ್ಳಿಯಪ್ಪ ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹರೀಶ್ ಜಿ. ಆಚಾರ್ಯ, ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನ ಚಾಲಕರ ಕರ್ತವ್ಯ ಇಂದು ಮಹತ್ವವನ್ನು ಪಡೆದುಕೊಂಡಿದ್ದು, ಜವಬ್ದಾರಿಯುತವಾದ ಈ ಸೇವೆ ಯಲ್ಲಿ ತೊಡಗಿರುವವರು ಕಾನೂನು ಪಾಲನೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು. ಚಾಲಕ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲೂ ತೊಡಗಿಸಿ ಕೊಳ್ಳುವಂತೆ ಕಿವಿಮಾತು ಹೇಳಿದ ಅವರು, ಸಾಮಾಜಿಕ ಕಳಕಳಿಯ ಸಂಘ-ಸಂಸ್ಥೆಗಳಿಗೆ ತಮ್ಮಿಂದಾದ ಸಹಾಯ ಮಾಡಿ ಎಂದು ಚಾಲಕರಿಗೆ ಕರೆ ನೀಡಿದರು. ವಿಕಾಸ ಜನಸೇವಾ ಟ್ರಸ್ಟ್‍ನ ಅಧ್ಯಕ್ಷ ರಮೇಶ್ ಮಾತನಾಡಿದರು. ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಸಂಚಾರಿ ಠಾಣಾ ಉಪಠಾಣಾಧಿಕಾರಿ ಪದ್ಮನಾಭ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.