ವೀರಾಜಪೇಟೆ, ಜ. 13: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಹೊಸ ಕಟ್ಟಡದ ಅಂಗಡಿ ಮಳಿಗೆಗಳ ಹರಾಜಿನಿಂದ ಪಂಚಾಯಿತಿಗೆ ವಾರ್ಷಿಕ ರೂ 4.36000 ಆದಾಯ ಬಂದಿದೆ.

ಇಲ್ಲಿನ ಪುರಭವನದಲ್ಲಿ ನಡೆದ 23 ಅಂಗಡಿ ಮಳಿಗೆಗಳ ಪೈಕಿ 7 ಅಂಗಡಿ ಮಳಿಗೆಗಳು ವಾರ್ಷಿಕವಾಗಿ ತಲಾ ಒಂದು ಮಳಿಗೆ ರೂ 62,400ಕ್ಕೆ ಹರಾಜು ಆಗಿದ್ದು ಉಳಿದ ಮಳಿಗೆಗಳು ಸರಕಾರಿ ದರಕ್ಕಿಂತಲೂ ಕಡಿಮೆಗೆ ಬಿಡ್ ಆದ ಕಾರಣ 16ಮಳಿಗೆಗಳ ಹರಾಜನ್ನು ಮುಂದೂಡಲಾಯಿತು.

ಹರಾಜು ಪ್ರಕ್ರಿಯೆಯಲ್ಲಿ ನೂತನ 10 ಮಳಿಗೆಗಳು ಹಾಗೂ ಈ ಹಿಂದೆ ಹರಾಜಾಗಿ ಹಿಂದಿರುಗಿಸಲ್ಪಟ್ಟ 13 ಮಳಿಗೆಗಳು ಸೇರಿ ಒಟ್ಟು 23 ಮಳಿಗೆಗಳು ಹರಾಜಿಗೆ ಲಭ್ಯವಿತ್ತು. ಆದರೆ ನೂತನ 10 ಮಳಿಗೆಗಳಲ್ಲಿ 7 ಮಳಿಗೆಗಳು ಮಾತ್ರ ಹರಾಜಾಗಿವೆ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮಾತನಾಡಿ ಕೆಲವು ಮಳಿಗೆಗಳು ಹಳೆಯದಾಗಿರುವುದರಿಂದ ಅವುಗಳನ್ನು ಕೆಡವಿ ನೂತನ ಆಧುನಿಕ ಮಾರುಕಟ್ಟೆ ಸಂಕೀರ್ಣ ನಿರ್ಮಾಣದ ಪ್ರಸ್ತಾವನೆ ಇರುವುದರಿಂದ ಅಂತಹ ಮಳಿಗೆಗಳನ್ನು 11 ತಿಂಗಳಿಗೆ ಮಾತ್ರ ಬಾಡಿಗೆಗೆ ನೀಡಲಾಗಿದೆ ಎಂದು ಹೇಳಿದರು.

ಕೆಲವು ಮಳಿಗೆಗಳು ಈ ಹಿಂದೆ ಉತ್ತಮ ದರಕ್ಕೆ ಹರಾಜಾಗಿದ್ದರೂ, ಬಳಿಕ ಅದನ್ನು ಪಡೆದವರು ಹಿಂದಿರುಗಿಸಿದ್ದರಿಂದ ಒಟ್ಟು ನಾಲ್ಕು ಬಾರಿ ಆ ಮಳಿಗೆಗಳನ್ನು ಹರಾಜು ನಡೆಸುವಂತಾಗಿದೆ. ಸರಕಾರಿ ದರಕ್ಕೆ ಪೂರಕವಾಗಿ ಹರಾಜಾಗದ ಮಳಿಗೆಗಳನ್ನು ಸಮೀಪದ ಮೊತ್ತಕ್ಕೆ ಹರಾಜಿನಲ್ಲಿ ಬಿಡ್ ಮಾಡಿದವರಿಗೆ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಕೋರಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೆಲವು ವರ್ತಕರು ಮಾತನಾಡಿ, ಪಟ್ಟಣದ ರಸ್ತೆ ಬದಿಯಲ್ಲಿ ನಿರಂತರವಾಗಿ ತರಕಾರಿ ಸೇರಿದಂತೆ ಇತರ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಮಾರುಕಟ್ಟೆ ಒಳಗೆ ವ್ಯಾಪಾರ ಕುಸಿದಿದೆ. ಆದ್ದರಿಂದ ವರ್ತಕರು ಪಂಚಾಯಿತಿಗೆ ಹೆಚ್ಚಿನ ಬಾಡಿಗೆ ನೀಡಿ ಮಳಿಗೆ ಪಡೆಯಲು ಸಾಧ್ಯವಿಲ್ಲ ಎಂದರು. ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಆಡಳಿತಾಧಿಕಾರಿ ಮಹೇಶ್, ಪಟ್ಟಣ ಪಂಚಾಯಿತಿ ಇಂಜಿನಿಯರ್ ಹೇಮ್‍ಕುಮಾರ್, ಸದಸ್ಯರಾದ ಅಗಸ್ಟಿನ್ ಬೆನ್ನಿ, ಮಹಮದ್ ರಾಫಿ, ಡಿ.ಪಿ.ರಾಜೇಶ್, ಹರ್ಷವರ್ಧನ್, ರಜನಿಕಾಂತ್, ಸುಷ್ಮಿತಾ, ಸುನಿತಾ, ಅನಿತಾ ಪೂರ್ಣಿಮಾ ಮತ್ತಿತರರು ಇದ್ದರು.