ಸುಂಟಿಕೊಪ್ಪ, ಜ. 12: ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಅವರು ಜಿ.ಪಂ.ಅನುದಾನದಡಿ ಬಿಡುಗಡೆಯಾದ 23 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಸುಂಟಿಕೊಪ್ಪ ರಾಮ ಬಡಾವಣೆ ಯಲ್ಲಿ ರಸ್ತೆ ನಿರ್ಮಾಣಕ್ಕೆ 16 ಲಕ್ಷ ರೂ ಬಿಡುಗಡೆಯಾಗಿದ್ದು, ಉಲುಗುಲಿ ರಸ್ತೆ (ಮಾರುಕಟ್ಟೆ) ಕಾಮಗಾರಿಗೆ 7 ಲಕ್ಷ ರೂ. ಮೀಸಲಿಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಲು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯರುಗಳು ನಿಗಾವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಕಲಾ ಹೇಳಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಜಾಕ್, ಕೆ.ಇ.ಕರೀಂ, ಎ.ಶ್ರೀಧರ್ ಕುಮಾರ್, ರತ್ನಾ ಜಯನ್, ನಾಗರತ್ನ ಸುರೇಶ್, ಗಿರಿಜಾ ಉದಯಕುಮಾರ್, ಶೋಭಾ ರವಿ ಮತ್ತಿತರರು ಇದ್ದರು.