ಚೆಟ್ಟಳ್ಳಿ, ಜ. 13: ನೆಲ್ಲಿಹುದಿಕೇರಿ ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ದಲಿತ ಸಂಘರ್ಷ ಸಮಿತಿಯ ವತಿಯಿಂದ ಸನ್ಮಾನಿಸ ಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ದಿವಾಕರ್, ಕಳೆದ ಹತ್ತಾರು ವರ್ಷಗಳಿಂದ ಶೇ. 80 ಕಿಂತಲೂ ಅಧಿಕ ಫಲಿತಾಂಶ ಬಂದ ಕಾಲೇಜು ಗಳನ್ನು ಗುರುತಿಸಿ ಅಲ್ಲಿನ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯ ಸಂಘ ಮಾಡುತ್ತಿದ್ದು, 2018-19ನೇ ಸಾಲಿನಲ್ಲಿ ಈ ಪದವಿಪೂರ್ವ ಕಾಲೇಜು ಶೇ. 100 ಫಲಿತಾಂಶ ಪಡೆದಿದ್ದು ಹೆಮ್ಮೆಯ ವಿಷಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಸರಕಾರ ಇಂದು ವಿದ್ಯಾಭ್ಯಾಸಕ್ಕೆ ಸಾಕಷ್ಟು ಸಹಕಾರ ಸೌಲಭ್ಯಗಳನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳ ಬೇಕು ಎಂದರು. ಉನ್ನತಮಟ್ಟಕ್ಕೆ ಬೆಳೆಯಲು ಕಠಿಣ ಪರಿಶ್ರಮ ಮತ್ತು ಏಕಾಗ್ರತೆ ಅಗತ್ಯ. ಹೆಚ್ಚು ಹೆಚ್ಚು ಪತ್ರಿಕೆ ಗಳನ್ನು ಓದುವುದು ರೂಢಿಸಿಕೊಳ್ಳ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಭವಾನಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಅಂಕವು ಅಮೂಲ್ಯವಾದದ್ದು, ಆದುದರಿಂದ ವಿದ್ಯಾರ್ಥಿಗಳು ಓದಿನೆಡೆಗೆ ಹೆಚ್ಚು ಗಮನ ಹರಿಸುವುದು ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ದೀಪಕ್ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳೇ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದರು.

ಈ ಸಂದರ್ಭ ಪ್ರಭಾರ ಪ್ರಾಂಶುಪಾಲ ಪಿ.ವಿ. ಲೋಕೇಶ್, ಶಿಕ್ಷಕರಾದ ಜಸ್ಟೀನ್ ಕೊರಿಯ, ಭಾಗ್ಯಜ್ಯೋತಿ, ಬಿ.ಎನ್. ವಿಶ್ವನಾಥ್, ತುಳಸಿ, ಕೆ.ಎಸ್. ಕೃಷ್ಣ, ಎಂ.ಸಿ. ವಸಂತ್‍ಕುಮಾರ್, ಧನಂಜಯ, ಕುಮಾರ್, ಇಸ್ಮಾಯಿಲ್, ದಮಯಂತಿ ಅವರನ್ನ ಸನ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ತಾಲೂಕು ಪಂಚಾಯಿತಿ ಸದಸ್ಯೆ ಸುಹಾದ ಅಶ್ರಫ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಚ್ಚಯ್ಯ ಮುಂತಾದವರು ಉಪಸ್ಥಿತರಿದ್ದರು.