ಗೋಣಿಕೊಪ್ಪಲು, ಜ.13: ಹೊರ ರಾಜ್ಯದಲ್ಲಿ ಉಗ್ರರ ವಿಚಾರಣೆ ನಡೆಯುತ್ತಿದ್ದಂತೆಯೇ ಕರ್ನಾಟಕದ ವಿವಿಧ ಭಾಗದಲ್ಲೂ ಅನುಮಾನಸ್ಪದ ವ್ಯಕ್ತಿಗಳನ್ನು ಎನ್‍ಐಐ ತಂಡದ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಡಗಿನ ವಿವಿಧ ಭಾಗದಲ್ಲಿಯೂ ಈ ತಂಡವು ಅತ್ಯಂತ ಗೌಪ್ಯತೆಯೊಂದಿಗೆ ವಿಚಾರಣೆ ಕೈಗೆತ್ತಿಕೊಂಡಿದೆ.ಕೊಡಗು ಕೇರಳದ ಗಡಿ ಭಾಗವಾಗಿರುವುದರಿಂದ ನ್ಯಾಷನಲ್ ಇಂಟ್ರಿಗೇಟ್ ಇನ್ವಿಸ್ಟಿಗೇಷನ್ ತಂಡದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಅಧಿಕೃತವಾಗಿ ಯಾರನ್ನು ಕೂಡ ಜಿಲ್ಲೆಯಲ್ಲಿ ಬಂಧಿಸಿರುವ ಘಟನೆ ವರದಿಯಾಗಿಲ್ಲ. ಹೊರ ದೇಶದಿಂದ ದೂರವಾಣಿಯಲ್ಲಿ ಮಾತನಾಡಿರುವ ಅಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖಾ ತಂಡ ವಿಚಾರಣೆ ನಡೆಸುತ್ತಿದೆ. ಗೌಪ್ಯತೆಯೊಂದಿಗೆ ಕಾರ್ಯಾಚರಣೆ ಚುರುಕು(ಮೊದಲ ಪುಟದಿಂದ) ಕೊಡಗಿನ ಪೊಲೀಸರ ಗಮನಕ್ಕೂ ಬಾರದ ರೀತಿಯಲ್ಲಿ ಗೌಪ್ಯವಾಗಿ ದೇಶದ ಭದ್ರತಾ ನಿಗ್ರಹ ದಳದ ಅಧಿಕಾರಿಗಳು ವಿವಿಧ ಕೋನಗಳಿಂದ ತನಿಖೆಯನ್ನು ಮುಂದುವರೆಸಿದ್ದಾರೆ.
ಉಗ್ರರ ಚಟುವಟಿಕೆಗೆ ಆರ್ಥಿಕವಾಗಿ ಗೋಣಿಕೊಪ್ಪದ ವ್ಯಕ್ತಿಯೊಬ್ಬರು ಸಹಾಯ ಮಾಡಿರುವ ಬಗ್ಗೆ ಹರಡಿದ್ದ ಸುದ್ದಿಗಳ ಜಾಡು ಹಿಡಿದಿರುವ ತನಿಖಾ ತಂಡ ಸಂಶಯಾಸ್ಪದ ವ್ಯಕ್ತಿಗಳನ್ನು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟತೆ ಹೊರ ಬೀಳಲು ಇನ್ನಷ್ಟು ದಿನಗಳು ಕಾಯಬೇಕಾಗಿದ್ದು; ಇಂತಹ ವಿಷಯಗಳ ಬಗ್ಗೆ ಕೆಲವರು ಲಾಭ ಪಡೆದು ಸನ್ನಿವೇಶವನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವುದರ ಕುರಿತು ತನಿಖಾ ತಂಡ ಸೂಕ್ಷ್ಮವಾಗಿ ಗಮನಿಸುತ್ತಿದೆ.