ಮಡಿಕೇರಿ, ಜ. 12: ಕೊಡಗು ಜಿಲ್ಲಾ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ನೂತನ ಅಧ್ಯಕ್ಷರಾಗಿ ಯುವ ನಾಯಕ ಪಳೆಯಂಡ ರಾಬಿನ್ ದೇವಯ್ಯ ಅವರು ನೇಮಕಗೊಂಡಿದ್ದಾರೆ. ಮಂಗಳೂರಿನಲ್ಲಿ ಇಂದು ಕೊಡಗು ಸೇರಿದಂತೆ; ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಇಂದು ಪಕ್ಷದ ಮುಖಂಡರ ಉನ್ನತಮಟ್ಟದ ಸಭೆ ಜರುಗಿದ್ದು; ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಾಬಿನ್ ದೇವಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಚುನಾವಣಾ ಉಸ್ತುವಾರಿಗಳಾದ ನಿರ್ಮಲ್‍ಕುಮಾರ್ ಸುರಾನಾ, ಉದಯಕುಮಾರ್ ಶೆಟ್ಟಿ, ಗೋಪಾಲ ಕೃಷ್ಣ ಹೇರಳೆ, ಪ್ರಸಾದ್ ಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಹಾಲಿ ಅಧ್ಯಕ್ಷರಾಗಿದ್ದ ಬಿ.ಬಿ. ಭಾರತೀಶ್, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ನಾಲ್ಕು ಮಂಡಳದ ಅಧ್ಯಕ್ಷರುಗಳಾದ ಮನುಕುಮಾರ್ ರೈ, ಕಾಂಗೀರ ಸತೀಶ್, ನೆಲ್ಲೀರ ಚಲನ್, ಮನು ಮಂಜುನಾಥ್, ಪ್ರಮುಖರಾದ ಎಂ.ಬಿ. ದೇವಯ್ಯ, ನಾಪಂಡ ರವಿಕಾಳಪ್ಪ ಮತ್ತಿತರ ಪ್ರಮುಖರನ್ನು ಒಳಗೊಂಡ ಸಭೆಯಲ್ಲಿ ಚರ್ಚೆಯ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಬಿನ್ ದೇವಯ್ಯ ಅವರನ್ನು ಘೋಷಣೆ ಮಾಡಲಾಗಿದೆ. ಸಭೆಯಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಸುನಿಲ್ ಸುಬ್ರಮಣಿ ಅವರು ಅಭಿನಂದನಾ ಭಾಷಣದ ಮೂಲಕ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
ಸಮರ್ಥ - ಸಂಘಟನಾತ್ಮಕ ಕೆಲಸ
ನೂತನ ಅಧ್ಯಕ್ಷ ರಾಬಿನ್ ದೇವಯ್ಯ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಸಮರ್ಥ ರೀತಿಯಲ್ಲಿ ಹಾಗೂ
(ಮೊದಲ ಪುಟದಿಂದ) ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸುವದಾಗಿ ಹೇಳಿದರು. ಚಿಕ್ಕ ವಯಸ್ಸಿನಿಂದಲೇ ಪಕ್ಷಕ್ಕಾಗಿ ದುಡಿದಿದ್ದೇನೆ; ಈ ಸೇವೆಯನ್ನು ಗುರುತಿಸಿ ಅವಕಾಶ ನೀಡಿರುವದು ಸಂತಸ ತಂದಿದೆ. ಜಿಲ್ಲೆಯ ಶಾಸಕರುಗಳು, ಮಾಜಿ ಅಧ್ಯಕ್ಷರುಗಳು, ಬೂತ್‍ಮಟ್ಟದ ಪ್ರಮುಖರು ಸೇರಿದಂತೆ ಸರ್ವರ ಸಹಕಾರ ದೊಂದಿಗೆ ಪಕ್ಷದ ಹಿರಿಮೆ - ಗರಿಮೆಗೆ ಯಾವದೇ ಚ್ಯುತಿಬಾರದಂತೆ ಕೆಲಸ ನಿರ್ವಹಿಸುವದಾಗಿ ರಾಬಿನ್ ಭರವಸೆ ವ್ಯಕ್ತಪಡಿಸಿದರು. ಪಕ್ಷದಲ್ಲಿ ಯಾವದೇ ರೀತಿಯ ಗೊಂದಲಗಳು ಇಲ್ಲ. ಎಲ್ಲರ ಸಹಕಾರ ತಮಗಿದೆ ಎಂದ ಅವರು ಇತ್ತೀಚೆಗೆ ಗೋಣಿಕೊಪ್ಪದಲ್ಲಿ ಗೊಂದಲ ನಡೆದಿದೆ ಎನ್ನಲಾದ ಪ್ರಕರಣ ಕೇವಲ ‘ಕನ್‍ಫ್ಯೂಷನ್’ ಅಷ್ಟೆ ಎಂದು ಪ್ರತಿಕ್ರಿಯಿಸಿದರು.