ಮಡಿಕೇರಿ, ಜ. 12: ದೇಶದ ಪ್ರಮುಖ ಬೆಳೆಯಾಗಿರುವ ಕಾಫಿ ಉದ್ದಿಮೆಯ ರಕ್ಷಣೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸೂಕ್ತ ರೀತಿಯಲ್ಲಿ ಗಮನ ಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ವಿವಿಧ ಬೆಳೆಗಾರರ ಸಂಘಟನೆಗಳು, ಉದ್ದಿಮೆದಾರರು ಆಗ್ರಹಿಸಿವೆ.ಬೆಂಗಳೂರಿನ ಹೊಟೇಲ್ ಅಶೋಕದಲ್ಲಿ ಇತ್ತೀಚೆಗೆ ವಾಣಿಜ್ಯ ಇಲಾಖೆ, ಆರ್ಥಿಕ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಸಂಸದರನ್ನು ಒಳಗೊಂಡಿರುವ ಕೇಂದ್ರದ ಸಂಸದೀಯ ಮಂಡಳಿಯ ತಂಡದೊಂದಿಗೆ ನಿಗದಿಯಾಗಿದ್ದ ಸಭೆಯಲ್ಲಿ ಈ ಕುರಿತು ಗಮನ ಸೆಳೆಯಲಾಗಿದೆ. ಸಂಸದೀಯ ಮಂಡಳಿಯ ಅಧ್ಯಕ್ಷರಾದ ರೆಡ್ಡಿ ಅವರ ನೇತೃತ್ವದ ಸಮಿತಿ ರಾಜ್ಯಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
ಈ ಸಭೆಯಲ್ಲಿನ ವಿಚಾರಗಳು - ಚರ್ಚೆಗಳ ಕುರಿತಾಗಿ ಕಾಫಿ ಮಂಡಳಿಯ ಅಧ್ಯಕ್ಷರಾದ ಎಸ್.ಎಲ್. ಬೋಜೇಗೌಡ ಅವರು ‘ಶಕ್ತಿ’ಗೆ ಮಾಹಿತಿ ನೀಡಿದರು. ಕೆಜಿಎಫ್, ಕೆಪಿಎ, ಉಪಾಸಿ, ಸಿಪಿಎ ಸಂಘಟನೆಗಳ ಪ್ರತಿನಿಧಿಗಳು, ಉದ್ದಿಮೆದಾರರು, ರಫ್ತುದಾರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೆಲವು ವರ್ಷಗಳ ಹಿಂದೆ ಬರಗಾಲದಂತಹ ಸನ್ನಿವೇಶ, ಕಳೆದ ಎರಡು ವರ್ಷಗಳಿಂದ ಸತತವಾದ ಪ್ರಾಕೃತಿಕ ವಿಕೋಪದಿಂದಾಗಿ ಕಾಫಿ ಬೆಳೆಯುವ ಜಿಲ್ಲೆಗಳ ಬೆಳೆಗಾರರು ತತ್ತರಿಸುವಂತಾಗಿದೆ. ಕಾಫಿ ಫಸಲು ಸೇರಿದಂತೆ ವಿವಿಧ ರೀತಿಯ ವಹಿವಾಟುಗಳ ಮೇಲೆ ವಾತಾವರಣದ ಅಸಹಜತೆಯಿಂದ ತೀವ್ರ ಹೊಡೆತ ಬಿದ್ದಿದ್ದು; ಪ್ರಸ್ತುತದ ಸನ್ನಿವೇಶದಲ್ಲಿ ಬೆಳೆಗಾರರು ಚೇತರಿಸಿ ಕೊಳ್ಳಲಾಗದಂತಾಗಿದೆ.
ಇತರ ರೀತಿಯ ಬೆಳೆಗಳು ಹಾಗೂ ಕಾಫಿ ಬೆಳೆಗೆ ಹೋಲಿಕೆಯಿಲ್ಲ. ಆರಂಭಿಕ ಕಾಫಿ ಫಸಲು ಸಿಗಲು ಸುಮಾರು 6 ವರ್ಷ ಕಾಯಬೇಕು. ಅಲ್ಲದೆ ಇದು ಕೇವಲ ವರ್ಷಕ್ಕೆ ಒಂದು ಫಸಲು ಮಾತ್ರ ಸಿಗುವಂತದ್ದು; ಈ ಬೆಳೆ ಪರಿಸರಕ್ಕೆ ಪೂರಕವಾಗಿರು ವದಲ್ಲದೆ; ಸಾಕಷ್ಟು ಮಂದಿಗೆ ಉದ್ಯೋಗವಕಾಶ
(ಮೊದಲ ಪುಟದಿಂದ) ಸೇರಿದಂತೆ ಹಲವು ರೀತಿಯ ಅನುಕೂಲತೆಗಳನ್ನು ಕಲ್ಪಿಸುವಂತದ್ದು. ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಕಾಫಿ ಉದ್ದಿಮೆಯನ್ನು ಅವಲಂಬಿತರಾಗಿದ್ದಾರೆ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗಂಭೀರ ಚಿಂತನೆ ಮಾಡಿ ನೆರವಿಗೆ ಧಾವಿಸಬೇಕಿದೆ. ಕಾಫಿ ಉತ್ಪಾದಿತ ಹಲವು ಜಿಲ್ಲೆಗಳ ಆರ್ಥಿಕತೆಯ ಬೆನ್ನಲುಬು ಕೂಡಾ ಕಾಫಿ ಬೆಳೆಯಾಗಿದೆ ಎಂದು ಸಂಸದೀಯ ಮಂಡಳಿಯ ಗಮನಕ್ಕೆ ತರಲಾಗಿದೆ ಎಂದು ಬೋಜೇಗೌಡ ಅವರು ತಿಳಿಸಿದ್ದಾರೆ.
ಬೇರೆ ದೇಶಗಳಲ್ಲಿ ಈ ರೀತಿಯ ಸಮಸ್ಯೆಗಳು ಎದುರಾದಾಗ ಅಲ್ಲಿನ ಸರಕಾರಗಳು ಬೆಳೆಗಾರರಿಗೆ ನೆರವು ಒದಗಿಸಿವೆ. ಇಲ್ಲಿ ಬ್ಯಾಂಕ್ಗಳ ಪ್ರಹಾರವನ್ನು ತಡೆದುಕೊಳ್ಳಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ. ಸರಕಾರಗಳು ಸ್ಪಂದಿಸದಿದ್ದರೆ ಕಾಫಿ ಉದ್ದಿಮೆ ಸದ್ಯದ ಮಟ್ಟಿಗೆ ಪುನಶ್ಚೇತನ ಕಾಣಲು ಸಾಧ್ಯವೇ ಇಲ್ಲದಂತಾಗಿದೆ ಎಂದು ವಿವರಿಸಲಾಗಿದೆ. ಹಲವು ಸೂಕ್ತ ಯೋಜನೆಗಳ ಜಾರಿಯೊಂದಿಗೆ ಆಂತರಿಕವಾಗಿ ಕಾಫಿ ಬಳಕೆ ಹೆಚ್ಚಿಸಲು ಉತ್ತೇಜನ ನೀಡಬೇಕಾಗಿದೆ ಎಂದು ಸಭೆಯಲ್ಲಿದ್ದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿರುವದಾಗಿ ಭೋಜೇಗೌಡ ಅವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸರಕಾರಕ್ಕೆ ವರದಿ ನೀಡುವದಾಗಿ ಸಂಸದೀಯ ಮಂಡಳಿ ಆಶ್ವಾಸನೆ ನೀಡಿದ್ದಾಗಿ ಅವರು ತಿಳಿಸಿದರು.