ಸೋಮವಾರಪೇಟೆ, ಜ.11: ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಆದರ್ಶಗಳ ಪಾಲನೆ ಸಮಾಜದ ಇಂದಿನ ಅಗತ್ಯತೆಯಾಗಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಸೋಮವಾರಪೇಟೆ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾನು ಕ್ರೀಡಾ ಸಚಿವನಾಗಿದ್ದ ಸಂದರ್ಭ ವಿವೇಕಾನಂದರ 150ನೇ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆಚರಿಸುವ ಮೂಲಕ ಅವರ ಸಂದೇಶಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಲಾಗಿತ್ತು ಎಂದು ಸ್ಮರಿಸಿದ ಶಾಸಕ ರಂಜನ್, ಸಾರ್ವಜನಿಕರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಹೊಂದಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಸವಾಪಟ್ಟಣದ ತೋಂಟದಾರ್ಯ ಮಠಾಧೀಶರಾದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ವಿವೇಕಾನಂದರು ಭಾರತೀಯರೆಲ್ಲರಿಗೂ ‘ರೋಲ್ ಮಾಡೆಲ್’ ಆಗಬೇಕು. ಅವರಂತೆಯೇ ಎಲ್ಲರೂ ದೇಶಪ್ರೇಮ ಮತ್ತು ಧರ್ಮನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಎಲ್ಲರೂ ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ತ್ಯಾಗ ಮತ್ತು ಸೇವೆ ನಮ್ಮ ಧ್ಯೇಯವಾಗಬೇಕು. ವಿವೇಕಾನಂದರ ಜೀವನವನ್ನು ಅಧ್ಯಯನ ಮಾಡಬೇಕು. ಅವರ ಕನಸಿನ ಭವ್ಯ ಭಾರತ ನಿರ್ಮಾಣ ಎಲ್ಲರ ಸಂಕಲ್ಪವಾಗಬೇಕು ಎಂದರು.

ಕಿರಿಕೊಢ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕøತಿಯ ತಳಹದಿಯನ್ನು ವಿದೇಶಕ್ಕೂ ವಿಸ್ತರಿಸಿದ ಮಹಾನ್ ಸಂತ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ಸದಾನಂದ್ ಮಾತನಾಡಿ, ಕಳೆದ 7 ವರ್ಷಗಳಿಂದ ಸೋಮವಾರಪೇಟೆಯಲ್ಲಿ ವಿವೇಕಾನಂದ ಜಯಂತಿ ಆಚರಣೆಯ ಮೂಲಕ ಅವರ ಚಿಂತನೆಗಳನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ರಮೇಶ್, ಸಮಿತಿಯ ಕಾರ್ಯದರ್ಶಿ ಎಸ್. ಮಹೇಶ್, ಖಜಾಂಚಿ ಮೃತ್ಯುಂಜಯ ಅವರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಸ್ಪರ್ಧೆಗಳನ್ನು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಡೊಳ್ಳು ಕುಣಿತ ತಂಡದೊಂದಿಗೆ ವಿವೇಕಾನಂದರ ವಿಚಾರಧಾರೆಗಳ ಜಾಗೃತಿ ಜಾಥಾ ನಡೆಯಿತು.