ಕೆ.ಎಂ ಇಸ್ಮಾಯಿಲ್ ಕಂಡಕರೆ

ಮಡಿಕೇರಿ, ಜ. 11: ಸ್ವಂತ ಮಕ್ಕಳಿಂದ ದೂರ..ದೂರ..., ಸಂಬಂಧಿಕರಿಂದಲೂ ದೂರ, ಯಾವುದೇ ರೀತಿಯ ನೆಲೆ, ಸೂರಿಲ್ಲದೇ, ಪಾಳುಬಿದ್ದ ಕಟ್ಟಡ , ಬಸ್ಸ್ ನಿಲ್ದಾಣ, ಚಳಿ, ಗಾಳಿ ಮಳೆ, ಹೀಗೇ ಯಾರಾದರೂ ಏನನ್ನಾದರೂ ತಿನ್ನಲು ಕಾಸು ಕೊಟ್ಟರೆ ಊಟ, ಇಲ್ಲದಿದ್ದರೆ ಉಪವಾಸ ಇದು ಮಡಿಕೇರಿ ನಗರದಲ್ಲಿ ಮಾನಸಿಕ ಅಸ್ವಸ್ಥರಾಗಿಯೇ ತಿರುಗಾಡುತ್ತಾ ಜೀವನ ನಡೆಸುತ್ತಿರುವವರ ಕರುಣಾಜನಕ ಕಥೆÉ.

ಊಟ ಮಾಡಲು ಯಾರ ಬಳಿ ಹಣ ಕೇಳಿ ಸಿಗದಿದ್ದರೆ, ರಸ್ತೆ ಬದಿಯಲ್ಲಿ ಸಿಕ್ಕ ಚೀಲದಲ್ಲಿ, ಮಡಿಕೇರಿ ನಗರದಲ್ಲಿನ ರಸ್ತೆಗಳಲ್ಲಿರುವ ಗುಜರಿಗಳನ್ನು ಸಂಗ್ರಹಿಸಿ, ಗುಜರಿ ವ್ಯಾಪಾರಿಗಳಿಗೆ ನೀಡಿ, ಒಂದೊತ್ತಿನ ಊಟಕ್ಕೆ ದಾರಿ ಹುಡುಕುತ್ತಿರುವ ಚಿಂತಾಜನಕ ಸ್ಥಿತಿಯಲ್ಲಿ ಜೀವನ ದಿನ ದೂಡುತ್ತಿರುವವರಿಗೆ ಇದೀಗ ಮಡಿಕೇರಿ ಹಿತರಕ್ಷಣಾ ವೇದಿಕೆ ಆಸರೆ ಕಲ್ಪಿಸಲು ಮುಂದಾಗಿದೆ.

ಮಡಿಕೇರಿ ನಗರದಲ್ಲಿ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದ ಮೂವರನ್ನು ಗುರುತಿಸಿ ಬೆಂಗಳೂರಿನ ಆರ್.ವಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದ ನಂತರ, ಆಶ್ರಮಕ್ಕೆ ಸ್ಥಳಾಂತರಿಸಲು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಮುಂದಾಗಿದೆ.

ಮಡಿಕೇರಿ ನಗರದ ರಾಜಾಸೀಟ್, ಎಫ್.ಎಂ.ಸಿ ಕಾಲೇಜು ಭಾಗದಲ್ಲಿ ಸರಿಯಾದ ನೆಲೆ, ಸೂರಿಲ್ಲದೇ, ತಿರುಗಾಡುತ್ತಿರುವ ಮಹಿಳೆಯೊಬ್ಬಳಿಗೆ ಆಸರೆ ನೀಡಲು ಹಿತರಕ್ಷಣಾ ವೇದಿಕೆ ವಿಕಾಸ್ ಜನಸೇವಾ ಟ್ರಸ್ಟ್ ಮುಂದಾಗಿವೆÉ. ಸದ್ಯದಲ್ಲೇ ಇವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಿ, ವೃದ್ಧಾಶ್ರಮದಲ್ಲಿ ಆಸರೆ ನೀಡಲಾಗುವುದು.

ಕಳೆದ ವರ್ಷ ಐದು ಜನರಿಗೆ ಆಸರೆ

ಕಳೆದ ವರ್ಷ ಮಡಿಕೇರಿ ನಗರದಲ್ಲಿ ತಿರುಗಾಡುತ್ತಿದ್ದ 5 ಮಾನಸಿಕ ಅಸ್ವಸ್ಥರಿಗೆ ಆಸರೆ ನೀಡಿ ಮಡಿಕೇರಿ ಹಿತರಕ್ಷಣಾ ವೇದಿಕೆ ಹಾಗೂ ವಿಕಾಸ್ ಜನಸೇವಾ ಟ್ರಸ್ಟ್, ಶಕ್ತಿ ವೃದ್ದಾಶ್ರಮ ಮಾನವೀಯತೆ ಮೆರೆದಿದ್ದರು. ಸಾರ್ವಜನಿಕರು, ಪೊಲೀಸ್ ಇಲಾಖೆ, ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ನೆರವಿನಿಂದ 5 ಜನರನ್ನು ಬೆಂಗಳೂರಿನ ಆರ್.ವಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಆಶ್ರಮಕ್ಕೆ ಸ್ಥಳಾಂತರಿಸಿದ್ದರು. ಇದೀಗ ಅವರೆಲ್ಲರೂ ಗುಣಮುಖರಾಗಿದ್ದಾರೆ.

ಇದೀಗ ಮೂವರಿಗೆ ಆಸರೆ ನೀಡಲು ಹಿತರಕ್ಷಣಾ ವೇದಿಕೆ ಮುಂದಾಗಿದೆ. ಇದೀಗ ಮಡಿಕೇರಿ ನಗರದಲ್ಲಿ ಪಾಳುಬಿದ್ದ ಕಟ್ಟಡ, ಸರಿಯಾದ ಊಟ ವಸತಿಯಲ್ಲದೇ ತಿರುಗಾಡುತ್ತಿರುವ ಮೂವರನ್ನು ಹಿತರಕ್ಷಣಾ ವೇದಿಕೆ ಗುರುತಿಸಿದೆ.

ಮುಂದಿನ ದಿನಗಳಲ್ಲಿ ಇವರಿಗೆ ಬೆಂಗಳೂರಿನ ಆರ್.ವಿ.ಎಂ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿ, ಆಶ್ರಮಕ್ಕೆ ಸ್ಥಳಾಂತರಿಸಿ, ಆಸರೆ ನೀಡಲು ಮುಂದಾಗಿದೆ. ಮಡಿಕೇರಿ ನಗರ, ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥರು ಕಂಡು ಬಂದಲ್ಲಿ ಸಾರ್ವಜನಿಕರು ಮಡಿಕೇರಿ ಹಿತರಕ್ಷಣಾ ವೇದಿಕೆಗೆ ಮಾಹಿತಿ ನೀಡಲು ವೇದಿಕೆ ಅಧ್ಯಕ್ಷ ರವಿ ಗೌಡ ಮನವಿ ಮಾಡಿದ್ದಾರೆ.

9611101070 ರವಿ ಗೌಡ, 9845769736 ಸಂದೀಪ್ ಮಡಿಕೇರಿ,9731898768 ವಿನು ವಿಕಾಸ್ ಜನಸೇವಾ ಟ್ರಸ್ಟ್ 9986408081 ಹೆಚ್.ಆರ್ ಸತೀಶ್.