ಕೂಡಿಗೆ, ಜ. 11: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರದಲ್ಲಿ 100 ಎಕರೆಗೂ ಅಧಿಕ ಭೂಮಿಯನ್ನು ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆಗೆ ಗುರುತಿಸಲಾಗಿತ್ತು. ಅದರಂತೆ ಸರಕಾರದ ಸೂಚನೆಯ ಅನುಗುಣವಾಗಿ ರಾಜ್ಯಮಟ್ಟದ ಪೊಲೀಸ್ ಇಲಾಖೆಯ ಆದೇಶದಂತೆ ಸೋಮವಾರಪೇಟೆ ತಾಲೂಕಿನ ತೊರೆನೂರು ಗ್ರಾಮ ಸಮೀಪದ ಅಳುವಾರ ಗ್ರಾಮದಲ್ಲಿ ಪೊಲೀಸ್ ತರಬೇತಿ ಕೇಂದ್ರವನ್ನು ತೆರೆಯಲು ಸರ್ವೆ ಕಾರ್ಯವನ್ನು ಇಲಾಖೆಯ ವತಿಯಿಂದ ನಡೆಸಲಾಯಿತು.

ಅಳುವಾರ ಸಮೀಪದ 6ನೇ ಹೊಸಕೋಟೆ ಮತ್ತು ಅಂದಾನಿಪುರ ವ್ಯಾಪ್ತಿಯಲ್ಲಿ 87 ಎಕರೆ ಪ್ರದೇಶದ ಸಮೀಪ ಅಳುವಾರದಲ್ಲಿ 65 ಎಕರೆ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಯಿತು. ಕಂದಾಯ ಇಲಾಖೆಯ ಮೂಲಕ ಸರ್ವೆ ನಡೆಸಿ ಸರಕಾರಕ್ಕೆ ಇಲಾಖೆಯ ಮೂಲಕ ವರದಿ ಸಲ್ಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಕಳೆದ 10 ವರ್ಷಗಳ ಹಿಂದೆ ಅಗಿನ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದ ಬಾಸ್ಕರ್‍ರಾವ್ ಅವರು ಪೊಲೀಸ್ ತರಬೇತಿ ಕೇಂದ್ರವನ್ನು ಪ್ರಾರಂಭಿಸುವ ಬಗ್ಗೆ ಚಿಂತನೆಯನ್ನು ಮಾಡಿ ಅಳುವಾರದಲ್ಲಿ ಜಾಗವಿರುವ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ನೀಡಿದ್ದರು. ಅದರಂತೆ ರಾಜ್ಯಮಟ್ಟದ ಪೊಲೀಸ್ ಅಧಿಕಾರಿಗಳು ಅನೇಕ ಬಾರಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅದರ ಪ್ರಯತ್ನವಾಗಿ ಸರಕಾರದ ಆದೇಶದಂತೆ ಪೊಲೀಸ್ ತರಬೇತಿ ಕೇಂದ್ರ ಪ್ರಾರಂಭಿಸಲು ಸರ್ವೆ ಕಾರ್ಯ ಪ್ರಾರಂಭಿಸಲಾಯಿತು.

ಈ ಸಂದರ್ಭ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನದೇಶ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಹೆಬ್ಬಾಲೆ ಮತ್ತು ತೊರೆನೂರು ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳು ಸರ್ವೆಯರ್‍ಗಳಾದ ಮಹದೇವ, ಮಂಜುನಾಥ, ಕಿಶೋರ್‍ಕುಮಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು.