ಸೋಮವಾರಪೇಟೆ, ಜ. 11: ಇಲ್ಲಿನ ತಾಲೂಕು ಕಚೇರಿಯ ಅವ್ಯವಸ್ಥೆ ಗಳನ್ನು ಕೂಡಲೇ ಸರಿಪಡಿಸಲು ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ವತಿಯಿಂದ ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಕಟ್ಟಡ ಉದ್ಘಾಟನೆ ಗೊಂಡ ನಂತರ ಈವರೆಗೆ ಸುಣ್ಣಬಣ್ಣ ಕಂಡಿಲ್ಲ. ಮಳೆಗಾಲದಲ್ಲಿ ಛಾವಣಿ ಯಿಂದ ನೀರು ಸೋರಿಕೆಯಾಗುತ್ತಿದ್ದು, ಇಡೀ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರೂ ಈವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಸಂಸ್ಥೆಯ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಟಿ.ಜೆ. ಗಣೇಶ್ ಕುಮಾರ್ ಆರೋಪಿಸಿದರು.
ಇದರೊಂದಿಗೆ ತಾಲೂಕು ಕಚೇರಿ ಕಟ್ಟಡದ ಒಳಭಾಗದಲ್ಲಿ ಕಾಡು ಬೆಳೆದಿದ್ದು, ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿರುವ ಜನರೇಟರ್ ತುಕ್ಕು ಹಿಡಿಯುತ್ತಿದೆ.
ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಶೌಚಾಲ ಯದ ವ್ಯವಸ್ಥೆಯೂ ಇಲ್ಲದಾಗಿದೆ. ಆಧಾರ್, ಆರ್‍ಟಿಸಿ, ರೇಷನ್ ಕಾರ್ಡ್, ವೃದ್ಧಾಪ್ಯ ವೇತನ ಸೇರಿದಂತೆ ಇನ್ನಿತರ ಕೆಲಸಗಳಿಗೆ ತಿಂಗಳುಗಟ್ಟಲೆ ಅಲೆಯುವಂತಾಗಿದೆ. ಇದರೊಂದಿಗೆ ಸರ್ವರ್ ಸಮಸ್ಯೆಯೂ ಇದ್ದು, ತಕ್ಷಣ ತಾಲೂಕು ಕಚೇರಿಯ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.
ಸಂಬಂಧಿತ ಮನವಿಯನ್ನು ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭ ಸಮಿತಿಯ ಪದಾಧಿಕಾರಿ ಗಳಾದ ರಮೇಶ್, ಸತೀಶ್ ಅವರುಗಳು ಉಪಸ್ಥಿತರಿದ್ದರು.