ವೀರಾಜಪೇಟೆ, ಜ. 11: ಕೆದಮುಳ್ಳೂರು-ತೋರ ಗ್ರಾಮದಲ್ಲಿ ಸರಕಾರದ ಅನುದಾನದ ಮೇರೆ ರಸ್ತೆ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗುವುದು. ಗ್ರಾಮಸ್ಥರ ಬೇಡಿಕೆಯನ್ನು ಎಲ್ಲ ಹಂತಗಳಲ್ಲಿ ಈಡೇರಿಸಲು ಯೋಜನೆ ರೂಪಿಸಿರುವುದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ-ಕರಡ ಗ್ರಾಮ ಸಂಪರ್ಕ ಹಾಗೂ ತೋರ ಗ್ರಾಮದ ಲಿಂಕ್ ರಸ್ತೆಗೆ ರೂ. 75 ಲಕ್ಷ ವೆಚ್ಚದ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರಕಾರದ ಎಲ್ಲ ರೀತಿಯ ಅನುದಾನಗಳು ಸದ್ಭಳಕೆಯಾಗಬೇಕು. ಪ್ರತಿಯೊಂದು ಕಾಮಗಾರಿಗೂ ಗ್ರಾಮಸ್ಥರು ಸಹಕರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಕಳೆದ ಮಳೆಯಲ್ಲಿ ತೋರ ಗ್ರಾಮದ ಹತ್ತು ಮಂದಿ ಭೂ ಸಮಾಧಿಯ ದುರಂತದ ನಂತರ ಕ್ಷೇತ್ರದ ಶಾಸಕರು ಈ ವಿಭಾಗದಲ್ಲಿ ರಸ್ತೆ, ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡಿದ್ದಾರೆ ಎಂದು ಹೇಳಿದರು.

ಭೂಮಿಪೂಜೆ ಸಂದರ್ಭ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಂ.ಎಂ. ಪರಮೇಶ್ವರ್, ಚುಕ್ಕು ದೇವಯ್ಯ, ಬಿ.ಹೆಚ್. ಕಿರಣ್, ಬಿಜೆಪಿ ಸ್ಥಾನೀಯ ಸಮಿತಿ ಉಪಾಧ್ಯಕ್ಷ ರಮೇಶ್ ಕರುಂಬಯ್ಯ, ಪಟ್ರಪಂಡ ರಘು ನಾಣಯ್ಯ, ಮಲ್ಲಂಡ ಮಧು ದೇವಯ್ಯ, ಪಾಲೇಕಂಡ ಮನು ಚಂಗಪ್ಪ, ಗ್ರಾಮದ ಪ್ರಮುಖರಾದ ಮಾತಂಡ ಮೊಣ್ಣಪ್ಪ, ಕರಿನೆರವಂಡ ರಮೇಶ್, ಗೌಡುಧಾರೆ ಚೋಟು ಬಿದ್ದಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮೂವೇರ ಸುರೇಶ್, ಯತೀಶ್. ಗುತ್ತಿಗೆದಾರ ಕೆ.ಪಿ. ವೆಂಕಟೇಶ್ ಮತ್ತಿತರರು ಹಾಜರಿದ್ದರು.

ಈ ಕಾಮಗಾರಿಯ ನಂತರ ಕೆದಮುಳ್ಳೂರು ಗ್ರಾಮದಿಂದ ಜೌಕಿ ಹರಿಜನ ಕಾಲೋನಿಗೆ ರೂ. 35 ಲಕ್ಷ ವೆಚ್ಚದಲ್ಲಿ ಕೊಟ್ಟಚ್ಚಿ, ಬೀಟಿಕಾಡು ಸಂಪರ್ಕ ರಸ್ತೆ ಹಾಗೂ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀತಿಯಂಡ ಗಿರಿಜನ ಕಾಲೋನಿಗೆ ರೂ. 15 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಬೋಪಯ್ಯ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣ ಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.