ಗೋಣಿಕೊಪ್ಪಲು. ಜ. 10: ರಾತ್ರಿ ವೇಳೆಯಲ್ಲಿ ಬೆಂಗಳೂರಿನಿಂದ ಎರ್ನಾಕುಲಂ ಗೆ ತೆರಳುತ್ತಿದ್ದ ಸರ್ಕಾರಿ ಸಾರಿಗೆ ಸಂಸ್ಥೆಗೆ ಸೇರಿದ ಐರಾವತ ಬಸ್ ಪೊನ್ನಂಪೇಟೆ ಸಮಿಪದ ಬೇಗೂರು ಗ್ರಾಮದ ಬಳಿಯ ರಸ್ತೆ ಬದಿಯ ಗದ್ದೆ ಬಯಲಿಗೆ ಮಗುಚಿಕೊಂಡಿದ್ದು ಅದೃಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ನಿಲ್ದಾಣ ಬಿಟ್ಟಿದ್ದ ಬಸ್ ಮುಂಜಾನೆಯ ಎರಡು ಗಂಟೆ ಸುಮಾರಿಗೆ ಗೋಣಿಕೊಪ್ಪ ನಗರ ದಾಟಿ ಪೊನ್ನಂಪೇಟೆ ಮಾರ್ಗವಾಗಿ ಗಡಿ ಭಾಗ ಕುಟ್ಟ ದಾಟಿ ಎರ್ನಾಕುಲಂಗೆ ಈ ಬಸ್ ತೆರಳುತ್ತಿತ್ತು.ವಿಪರೀತ ಮಂಜು ಬೀಳುತ್ತಿದ್ದ ಕಾರಣ ಬಸ್ ಚಾಲಕನಿಗೆ ರಸ್ತೆ ಕಾಣುತ್ತಿರಲಿಲ್ಲ ಎನ್ನಲಾಗಿದೆ. ದೊಡ್ಡ ತಿರುವು ದಾಟುತ್ತಿರುವ ಸಂದರ್ಭ ಸಮೀಪದ ಗದ್ದೆಗೆ ಮಗುಚಿಕೊಂಡಿದೆ. ಬಸ್ಸಿನಲ್ಲಿ ಚಾಲಕ, ಕಂಡಕ್ಟರ್ ಸೇರಿದಂತೆ 30 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ಎರಡು ದಿನಗಳ ಹಿಂದೆ ಸಮೀಪದಲ್ಲಿ ಕಾರೊಂದು ಮೋರಿಯ ಕೆಳಗೆ ಮಗುಚಿಕೊಂಡಿತ್ತು. ಗ್ರಾಮದ ಜನರು ಈ ಘಟನೆ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.