ಮಡಿಕೇರಿ, ಜ. 10: ಕೊಡವ ಜನಾಂಗದ ಶ್ರೇಯೋಭಿವೃದ್ಧಿ, ಮಾಹಿತಿ, ಸಹಕಾರ ಮತ್ತಿತರ ಅಗತ್ಯ ಚಿಂತನೆಗಳೊಂದಿಗೆ 2010 ರಲ್ಲಿ ಪ್ರಾರಂಭಗೊಂಡಿರುವ ಕೊಡವಾಮೆ ಸಂಘಟನೆ ವತಿಯಿಂದ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಬಾಲಕನೋರ್ವನಿಗೆ ನೆರವಾಗಲು ಆತನ ಕುಟುಂಬಕ್ಕೆ ರೂ. 4.10 ಲಕ್ಷ ಆರ್ಥಿಕ ಸಹಾಯವನ್ನು ನೀಡಲಾಯಿತು.
ಪುಟ್ಟ ಬಾಲಕನೋರ್ವನಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು, ಭಾರೀ ಮೊತ್ತದ ಅಗತ್ಯವಿದ್ದರಿಂದ ಕೊಡವಾಮೆ ಸಂಘಟನೆ ಈ ನಿಟ್ಟಿನಲ್ಲಿ ಗಮನ ಹರಿಸಿ ಆರ್ಥಿಕ ನೆರವನ್ನು ಕ್ರೋಢೀಕರಿಸಿತ್ತು. ಸಂಘಟನೆಯ ಸ್ವಯಂ ಸೇವಕರು, ಹಿತೈಷಿಗಳು ಹಣ ಸಹಾಯ ನೀಡಿದ್ದು, ಸಂಗ್ರಹಿತವಾದ ರೂ. 4.10 ಲಕ್ಷ ಮೊತ್ತವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಕೊಡವಾಮೆ ಸಂಘಟನೆಯು ನೋಂದಾಯಿತ ಸಂಸ್ಥೆಯಾಗಿದ್ದು, ಸಾವಿರಾರು ಸದಸ್ಯರನ್ನು ಒಳಗೊಂಡಿದೆ. ಜನಾಂಗದ ಅಗತ್ಯತೆಗಳ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ ಮೂಲಕ ಇತ್ತೀಚೆಗೆ ಮಂಗಳೂರು ವಿ.ವಿ.ಯ ನಿವೃತ್ತ ಉಪ ಕುಲಪತಿ ಡಾ. ಕಂಡ್ರತಂಡ ಕಾವೇರಪ್ಪ ಅವರ ಮುಂದಾಳತ್ವದಲ್ಲಿ ಬೆಂಗಳೂರಿನಲ್ಲಿ ಕೊಡವ ಜನಾಂಗದ ಬುಡಕಟ್ಟು ಸಂಸ್ಕøತಿ ಹಾಗೂ ಭಾಷಾ ಅಧ್ಯಯನ ಕಾರ್ಯವನ್ನು ನಡೆಸುತ್ತಿದೆ. ಕೊಡವ ಸಂಸ್ಕøತಿಯ ಆಚಾರ, ವಿಚಾರ, ಪದ್ಧತಿ, ಪರಂಪರೆಗಳನ್ನು ಆಸಕ್ತರಿಗೆ ವಿವರಣಾತ್ಮಾಕವಾಗಿಯೂ, ಪ್ರಾಯೋಗಿಕವಾಗಿಯೂ ಕಲಿಸಲಾಗುತ್ತಿದ್ದು, ಸಾಕಷ್ಟು ಮಂದಿ ಇದರಲ್ಲಿ ಭಾಗವಹಿಸುತ್ತಿರುವದಾಗಿ ಸಂಘಟನೆಯ ಆಡಳಿತಾಧಿಕಾರಿ ಉದಿಯಂಡ ರೋಷನ್ ಸೋಮಣ್ಣ ಅವರು ತಿಳಿಸಿದ್ದಾರೆ.