ಗೋಣಿಕೊಪ್ಪ, ಜ. 9: ಜಿಲ್ಲೆಯ ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಕ್ಕೆ ಇದೀಗ ಟ್ಯಾಕ್ಸಿ ಚಾಲಕರು, ಮಾಲೀಕರೂ ಸೇರ್ಪಡೆಗೊಂಡಿದ್ದಾರೆ. ಟ್ಯಾಕ್ಸಿ ಓಡಿಸುವವರ ಜೀವನ ಶೈಲಿಯಲ್ಲಿ ಬೆಂಗಳೂರು ನಗರ ಅರಬ್ಬಿ ಸಮುದ್ರವಿದ್ದಂತೆ, ಮೈಸೂರು ನಗರ ನದಿ ಇದ್ದಂತೆ,ಕೊಡಗು ಜಿಲ್ಲೆ ಕೆರೆ ಇದ್ದಂತೆ ಅರ್ಥೈಸಬಹುದು. ಮಹಾ ನಗರಗಳಲ್ಲಿ ಒಂದಿಲ್ಲ ಒಂದು ಬಾಡಿಗೆಗಳು ಟ್ಯಾಕ್ಸಿ ಚಾಲಕರಿಗೆ ಸಿಕ್ಕೆ ಸಿಗುತ್ತದೆ. ಇದರಿಂದ ಇವರ ಜೀವನ ಸುಧಾರಣೆ ಕಾಣುತ್ತಿದೆ; ಆದರೆ ಕೊಡಗಿನಲ್ಲಿ ಸೀಮಿತ ಪ್ರದೇಶವಿರುವುದರಿಂದ ಇಲ್ಲಿಯ ‘ಸೀಸನ್’ಗೆ ಸರಿಯಾಗಿ ಮಾತ್ರ ಟ್ಯಾಕ್ಸಿ ಚಾಲಕರಿಗೆ ಕೆಲಸ ಸಿಗುವಂತಹದ್ದನ್ನು ಕಾಣಬಹುದಾಗಿದೆ; ಆದರೆ ಇದೀಗ ‘ಸೀಸನ್’ಗಳಲ್ಲಿಯೂ ಸಿಗುವ ಬಾಡಿಗೆ ಪಕ್ಕದ ಕೇರಳ ರಾಜ್ಯದ ಟ್ಯಾಕ್ಸಿಗಳ ಪಾಲಾಗುತ್ತಿರುವುದು ಜಿಲ್ಲೆಯ ಟ್ಯಾಕ್ಸಿ ಚಾಲಕರ, ಮಾಲೀಕರ ದೌರ್ಭಾಗ್ಯ. ಲಕ್ಷಾಂತರ ಮೌಲ್ಯದ ಕಾರು, ವ್ಯಾನ್, ಜೀಪ್, ಟೆಂಪೋ ಟ್ರಾವೆಲ್ಸ್, ವಾಹನಗಳನ್ನು ಸಾಲದ ರೂಪದಲ್ಲಿ ಪಡೆದು ಜೀವನ ಸುಧಾರಣೆ ಕಂಡುಕೊಳ್ಳುತ್ತಿದ್ದ ಕುಟುಂಬಗಳು ಇದೀಗ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಇದನ್ನೇ ನಂಬಿ ಬ್ಯಾಂಕ್‍ಗಳಿಂದ ಪಡೆದ ಸಾಲ ಕಟ್ಟಲಾರದ ಪರಿಸ್ಥಿತಿಗೆ ತಂದೊಡ್ಡಿದೆ.

24 ಸಾವಿರ ಟ್ಯಾಕ್ಸ್, 32 ಸಾವಿರ ಇನ್ಸೂರೆನ್ಸ್, ಎಫ್ಸಿ, ಹೈಪೊತಿಕೇಷನ್ ಎಲ್ಲವನ್ನು ಸರ್ಕಾರದ ನಿಯಮದಂತೆ ಮಾಡಿಕೊಂಡು ಪ್ರಯಾಣಿಕರಿಗಾಗಿ ದಿನ ಮುಂಜಾನೆ ಟ್ಯಾಕ್ಸಿ ನಿಲ್ದಾಣದಲ್ಲಿ ಎದುರು ನೋಡುತ್ತಿದ್ದರೂ ಇತ್ತ ಯಾರೂ ಆಗಮಿಸುತ್ತಿಲ್ಲ. ಕೇರಳ ರಾಜ್ಯದಿಂದ ಇಲ್ಲಿಯ ಅಯ್ಯಪ್ಪ ಭಕ್ತರನ್ನು ಸಂಪರ್ಕಿಸಿ ಇಲ್ಲಿಂದ ಕರೆದೊಯ್ಯುವ ಈ ರಾಜ್ಯದ ಟ್ಯಾಕ್ಸಿಗಳು ಸಂಪಾದನೆಯನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿಯ ಟ್ಯಾಕ್ಸಿ ಚಾಲಕರ ಪರಿಸ್ಥಿತಿ ಮಾತ್ರ ಕೇಳುವವರೇ ಇಲ್ಲದಂತಾಗಿದೆ.

ಕೊಡಗಿನ ಗಡಿ ಭಾಗದ ಕೇರಳ ರಾಜ್ಯದಿಂದ ಕರ್ನಾಟಕ ರಾಜ್ಯದ ಯಾವುದೇ ಅನುಮತಿಯಿಲ್ಲದೆ ರಾಜಾರೋಷವಾಗಿ ಟ್ಯಾಕ್ಸಿಗಳು ಕೊಡಗು ಜಿಲ್ಲೆಗೆ ಆಗಮಿಸುತ್ತಿವೆ. ಇಲ್ಲಿರುವ ಸಾವಿರಾರು ಸಂಖ್ಯೆಯ ಶಬರಿಮಲೆ ಭಕ್ತರನ್ನು ಕರೆದೊಯ್ಯುವ ಮೂಲಕ ಇಲ್ಲಿಯ ಚಾಲಕರಿಗೆ ಬಾಡಿಗೆ ಇಲ್ಲದಂತೆ ಮಾಡಿದ್ದಾರೆ. ಅಯ್ಯಪ್ಪ ಸ್ವಾಮಿ ಭಕ್ತರನ್ನೇ ಮೂಲವಾಗಿರಿಸಿಕೊಂಡು ನೂರಾರು ಸಂಖ್ಯೆಯಲ್ಲಿ ಕೇರಳ ರಾಜ್ಯದ ಟ್ಯಾಕ್ಸಿಗಳು ಆಗಮಿಸುತ್ತಿವೆ. ಇದರಿಂದ (ಮೊದಲ ಪುಟದಿಂದ) ಜಿಲ್ಲೆಯ ಟ್ಯಾಕ್ಸಿ ಮಾಲೀಕರು, ಚಾಲಕರು ಯಾವುದೇ ಬಾಡಿಗೆ ಇಲ್ಲದೆ ದಿನ ಕಳೆಯುವಂತಾಗಿದೆ. ಕೆಲವು ಟ್ಯಾಕ್ಸಿ ಚಾಲಕರು ನಿಲ್ದಾಣದಲ್ಲಿ ಮುಂಜಾನೆಯಿಂದ ಸಂಜೆವರೆಗೂ ನಿಂತು ಬರಿಗೈನಲ್ಲಿ ವಾಪಸ್ ತೆರಳುತ್ತಿದ್ದಾರೆ.

ಕೇರಳ ರಾಜ್ಯದಿಂದ ಬರುವ ವಾಹನಗಳು ರಾಜಾರೋಷವಾಗಿ ಇಲ್ಲಿಯ ಪ್ರಯಾಣಿಕರನ್ನು ತುಂಬಿಸಿಕೊಂಡು ತೆರಳುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ, ಆರ್‍ಟಿಒ ಅಧಿಕಾರಿಗಳಿಗೆ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರೂ ಇಲ್ಲಿಯ ತನಕ ಯಾವುದೇ ಸ್ಪಂದನ ದೊರಕಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವದೆ? ಕಾದು ನೋಡಬೇಕು.