ಮಡಿಕೇರಿ, ಜ. 9: ನಗರದ ಜಿ.ಪಂ. ನೂತನ ಸಭಾ ಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಹಸಿರು ದಳ, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಘನತ್ಯಾಜ್ಯ ನಿರ್ವಹಣೆ ಕುರಿತು ಮಡಿಕೇರಿ ತಾಲೂಕಿನ 14, ವೀರಾಜಪೇಟೆ ತಾಲೂಕಿನ 38 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಅನುಷ್ಠಾನಗೊಳಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಹಸಿರು ದಳದ ಕಬೀರ್ ಅರೋರ ಘನತ್ಯಾಜ್ಯ ನಿರ್ವಹಣೆ ಕಾಯ್ದೆ-ಉಪವಿಧಿಗಳು ಮತ್ತು ನಿಯಮಗಳು ಹಾಗೂ ಗ್ರಾಮ ಪಂಚಾಯಿತಿಗಳ ಯಶೋಗಾಥೆ ಕುರಿತು ಮಾಹಿತಿ ನೀಡಿದರು.
ಘನತ್ಯಾಜ್ಯ ನಿರ್ವಹಣೆಯ ರೌಂಡ್ ಟೇಬಲ್‍ನ ಡಾ. ಶಾಂತಿ ತುಮ್ಮಾಲ ಪ್ಲಾಸ್ಟಿಕ್ ನಿಷೇಧ ಮತ್ತು ಶೂನ್ಯ ತ್ಯಾಜ್ಯ ಸಾಧನೆ ಮತ್ತು ಬೆಂಗಳೂರು ಹೆಚ್‍ಎಸ್‍ಆರ್ ಬಡಾವಣೆಯ ಯಶೋಗಾಥೆ ಮತ್ತು ‘ಗ್ರೀನ್ ದಿ ರೆಡ್’ ಕ್ಯಾಂಪೇನ್ (ಪರ್ಯಾಯ ಮಹಿಳೆಯರ ವೈಯುಕ್ತಿಕ ಶುಚಿತ್ವ) ಕುರಿತು ಮಾಹಿತಿ ನೀಡಿದರು.
ವಾಸುಕಿ ಅಯ್ಯಂಗಾರ್ ಅವರು ಸರಳ ವಿಧಾನದಲ್ಲಿ ಹಸಿಕಸದಿಂದ ಗೊಬ್ಬರ ತಯಾರಿಕೆ ಮತ್ತು ಮಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ವಿವಿಧ ಕಾಂಪೋಸ್ಟು ಮಾದರಿಗಳನ್ನು ಪ್ರಸ್ತುತಪಡಿಸಿದರು.
ಪೊನ್ನಂಪೇಟೆಯ ಪಿಡಿಒ ಪುಟ್ಟರಾಜು ಸಾರ್ವಜನಿಕರಿಗೆ ತ್ಯಾಜ್ಯ ವಿಂಗಡಣೆಯ ಕುರಿತು ಹಮ್ಮಿಕೊಂಡಿರುವ ಜಾಗೃತಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರ ದಲ್ಲಿ ಜಿ.ಪಂ. ಅಧಿಕಾರಿಗಳು, ವಿವಿಧ ಗ್ರಾ.ಪಂ. ಅಧ್ಯಕ್ಷರುಗಳು, ಪಿಡಿಒಗಳು ಇತರರು ಇದ್ದರು.
ಹರ್ಷಿತಾ ಪ್ರಾರ್ಥಿಸಿದರು, ಸ್ವಚ್ಛ ಭಾರತ್ ಮಿಷನ್‍ನ ಜಿಲ್ಲಾ ಸಂಚಾಲಕ ಡಿ.ಡಿ. ಪೆಮ್ಮಯ್ಯ ಸ್ವಾಗತಿಸಿ, ಎ.ಎಂ. ಸೂರಜ್ ವಂದಿಸಿದರು.