ಸೋಮವಾರಪೇಟೆ, ಜ. 9: ಸೋಮವಾರಪೇಟೆಯಿಂದ ಕೋವರ್‍ಕೊಲ್ಲಿ ಮಾರ್ಗವಾಗಿ ಕುಶಾಲನಗರ-ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಕುಶಾಲನಗರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಮಾರುತಿ 800 ಕಾರಿನ ನಡುವೆ ಸಮೀಪದ ಕುಸುಬೂರು ಕೆರೆಯ ಬಳಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ತಪ್ಪಿದೆ.
ಬೆಳಿಗ್ಗೆ ಮಡಿಕೇರಿಯಿಂದ ಸೋಮವಾರಪೇಟೆಗೆ ಆಗಮಿಸಿ, ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ (ಕೆ.ಎ. 21 ಎಫ್ 0025) ಹಾಗೂ ಕುಶಾಲನಗರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ, ಕುಶಾಲನಗರದ ಉದ್ಗಮ್ ಶಾಲೆಗೆ ಸೇರಿದ ಮಾರುತಿ ಕಾರಿನ (ಕೆ.ಎ. 12 ಪಿ.8874) ನಡುವೆ ಅವಘಡ ಸಂಭವಿಸಿದ್ದು, ಕಾರಿನಲ್ಲಿದ್ದ ಚಾಲಕ ಕುಶಾಲನಗರದ ಗೌತಮ್ ಮತ್ತು ಶಾಲಾ ಸಿಬ್ಬಂದಿ ಗುಡ್ಡೆಹೊಸೂರಿನ ರಜೀನಾ ಅವರುಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕುಸುಬೂರು ಕೆರೆಯ ತಿರುವಿನಲ್ಲಿ ಟಿಪ್ಪರ್ ವಾಹನವನ್ನು ‘ಓವರ್‍ಟೇಕ್’ ಮಾಡುವ ಸಂದರ್ಭ ಎದುರಿನಿಂದ ಆಗಮಿಸಿದ ಸರ್ಕಾರಿ ಬಸ್‍ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು, ಬಸ್‍ಗೂ ಸಣ್ಣ ಪುಟ್ಟ ಹಾನಿಯಾಗಿದೆ. ಈ ಬಗ್ಗೆ ಬಸ್ ಚಾಲಕ ನಾಣಯ್ಯ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಎಎಸ್‍ಐ ಪುಟ್ಟಪ್ಪ ಹಾಗೂ ಸಿಬ್ಬಂದಿ ಶಿವಕುಮಾರ್ ಅವರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.