ಮಡಿಕೇರಿ, ಜ. 9: ಕರ್ನಾಟಕ ಪ್ರವಾಸೋದ್ಯಮವನ್ನು ರಾಷ್ಟ್ರದಲ್ಲಿ ಉನ್ನತ ದರ್ಜೆಗೆ ಏರಿಸಲು ಯತ್ನಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಪ್ರವಾಸೋದ್ಯಮ ನೂತನ ನೀತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದಲ್ಲಿ ವಿಫುಲ ಅವಕಾಶ ಮತ್ತು ಸಂಪನ್ಮೂಲವಿದ್ದು, ಅದನ್ನು ಸದುಪಯೋಗಪಡಿಸಿ ಹೊಸ ಉದ್ಯೋಗ ಸೃಷ್ಟಿಸಲಾಗುವುದು ಎಂದು ಯಡಿಯೂರಪ್ಪ ನುಡಿದರು. ಬಜೆಟ್‍ನಲ್ಲಿ ಪ್ರತ್ಯೇಕ ಹಣ ನಿಗದಿ ಮಾಡಲಾಗುವುದು ಎಂದು ಭರವಸೆಯಿತ್ತರು.
ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಮಾತನಾಡಿ, ಅವರ ನೇತೃತ್ವದಲ್ಲಿ ತಂಡವು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿರುವುದಾಗಿ ತಿಳಿಸಿದರು. ಆಯಾ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯತೆ, ಸಾಧಕ - ಬಾಧಕಗಳ ಕುರಿತು ವರದಿ ತಯಾರಿಸುತ್ತಿರುವುದಾಗಿ ಹೇಳಿದರು. ಸಹಾಯಕ ನೀತಿ ರೂಪಿಸುವುದಾಗಿ ನುಡಿದರು.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಮಾತನಾಡಿ, ರಾಜ್ಯದಲ್ಲಿ ದೀರ್ಘಕಾಲಿಕ ಹಾಗೂ ಶೀಘ್ರ ಯೋಜನೆಗಳನ್ನು ರೂಪಿಸುತ್ತಿದ್ದು, ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡವರ ಅಭಿಪ್ರಾಯ ಸಂಗ್ರಹಿಸಲು ಕಾರ್ಯಾಗಾರ ಆಯೋಜಿಸಿರುವುದಾಗಿ ಹೇಳಿದರು.
ಎಂದಿನ ಅಭ್ಯಾಸದಂತೆ, ಹಿಂದಿನವರು ಆರಂಭಿಸಿದ ಯೋಜನೆಗಳನ್ನು ಕೈಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದರು. ಪ್ರವಾಸೋದ್ಯಮ ನೀತಿ 2020-25 ಅನ್ನು ತಯಾರಿಸಿ ಅದರಂತೇ ಕಾರ್ಯಪ್ರವೃತ್ತರಾಗುವುದಾಗಿ ಹೇಳಿದರು.
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಹೊರದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕೃತಕ ಸೌಂದರ್ಯ ರಾಶಿ ಸೃಷ್ಟಿಸುತ್ತಾರೆ, ನಮ್ಮಲ್ಲಿ ಸಹಜವಾದ ಪ್ರಕೃತಿ ಸೌಂದರ್ಯ ಮತ್ತು ಪೂರಕ ಸ್ಥಳಗಳಿದ್ದು, ಅದನ್ನು ಅಭಿವೃದ್ಧಿಪಡಿಸಬೇಕು ಎಂದರು. ಈಗಿರುವ ಪ್ರವಾಸೀ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವುದು ವಿಷಾದನೀಯ ಎಂದರು.
ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ, ಪ್ರವಾಸೋದ್ಯಮವನ್ನು ಪರಿಸರ ಸ್ನೇಹಿಯಾಗಿ ಬೆಳೆಸುವ ಕುರಿತು ಹೇಳಿದರು.
ಜಿಲ್ಲೆಗೆ ಮನ್ನಣೆ
ಹೊಸ ನೀತಿಯ ಕುರಿತು ಚರ್ಚಿಸಲು ಕೊಡಗಿನಿಂದ ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್ ಹಾಗೂ ಹೊಟೇಲ್ ಮಾಲೀಕರ ಸಂಘಕ್ಕೆ ಆಹ್ವಾನವಿತ್ತು.
ಹೊಟೇಲ್ ಮಾಲೀಕರ ಮನವಿ
ಹೊಟೇಲ್ ಮಾಲೀಕರ ಸಂಘದ ಸಲಹೆಗಾರ ಜಿ. ಚಿದ್ವಿಲಾಸ್ ಅವರು ಚರ್ಚೆಯಲ್ಲಿ ಭಾಗವಹಿಸಿ ಹಲವು ಸೂಚನೆ ನೀಡಿದರು.
ರಾಜ್ಯ ಸರಕಾರ ಪ್ರತಿವರ್ಷ ಜಿಲ್ಲೆಗಳಿಂದ ಆಯ್ದ ಹೋಂ ಸ್ಟೇ, ಹೊಟೇಲ್ ಹಾಗೂ ರೆಸಾರ್ಟ್‍ಗಳಿಗೆ ಪ್ರಶಸ್ತಿ ನೀಡುವಂತೆ ಹೇಳಿದರು. ಉದ್ಯಮಕ್ಕೆ ನೀಡುವ ಸಹಾಯಧನದ ಮೊತ್ತ ಹೆಚ್ಚಿಸುವಂತೆ, ಮಳೆಗಾಲದ ಪ್ರವಾಸೋದ್ಯಮ ಚೇತರಿಕೆಗೆ ವಿಶೇಷ ಪ್ಯಾಕೇಜ್ ನೀಡುವಂತೆ, ಆಯಾ ಜಿಲ್ಲಾ ಉತ್ಸವ ಮತ್ತು ಆಹಾರ ಮೇಳಗಳನ್ನು ನಡೆಸುವಂತೆ, ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಾನೂನು ರೂಪಿಸಲು ಕೋರಿದರು. ನಗರಾಭಿವೃದ್ಧಿ ಇಲಾಖೆ 2017ರಲ್ಲಿ ಸುತ್ತೋಲೆ ನೀಡಿ ಮನೆ, ಕಟ್ಟಡಗಳ ನಿರ್ಮಾಣಕ್ಕೆ ತೊಡಕಾಗಿದ್ದು, ಸುತ್ತೋಲೆ ಹಿಂಪಡೆಯುವಂತೆ ಹೇಳಿದರು.
ಹೋಂ ಸ್ಟೇ ಮನವಿ
ಸ್ಥಳೀಯ ಸಂಸ್ಕøತಿ ಆಧಾರದಲ್ಲಿ ಕಟ್ಟಲ್ಪಟ್ಟಿರುವ ಇಲ್ಲಿನ ಹೋಂ ಸ್ಟೇಗಳ ಅಳತೆ - ಆಕಾರ ಬದಲಿಸಿ, ಹೊಟೇಲ್ ಶೈಲಿಯಲ್ಲಿ ಕೃತಕ ರೂಪು ನೀಡಲು ಒತ್ತಾಯಿಸದಂತೆ ಅಧ್ಯಕ್ಷ ಅನಂತಶಯನ ಮನವಿ ಮಾಡಿದರು.
ಹೋಂ ಸ್ಟೇ, ಹೊಟೇಲ್ ನೀತಿಗೆ ಒಳಪಡದೆ ಗೆಸ್ಟ್‍ಹೌಸ್, ಸರ್ವೀಸ್ ಅಪಾರ್ಟ್‍ಮೆಂಟ್ ಹೆಸರಲ್ಲಿ ಉದ್ಯಮ ಮಾಡುತ್ತಿರುವವರನ್ನು ಕಾನೂನಿನಡಿ ತರಲು ಕೋರಲಾಯಿತು. ಅನಧಿಕೃತ ಹೋಂ ಸ್ಟೇಗಳು, ಏಜೆಂಟರ ನಿಯಂತ್ರಣ ಚುರುಕುಗೊಳಿಸಲು, ಹೊಸ ಪರವಾನಗಿಗೆ ನೀಡಿರುವ ಮನವಿಗಳನ್ನು ಶೀಘ್ರ ಒದಗಿಸುವಂತೆ, ಕಟ್ಟಡ ಪರಿಶೀಲನೆಗೆ ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ನೀಡುವಂತೆ, ಗ್ರಾಮ - ನಗರ ಪಂಚಾಯತ್‍ಗಳಲ್ಲಿ ಮನಬಂದಂತೆ ತೆರಿಗೆ ವಿಧಿಸುತ್ತಿರುವುದನ್ನು ಸರಿಪಡಿಸುವಂತೆ, ಪ್ರವಾಸೋದ್ಯಮ ಇಲಾಖೆ ಮತ್ತು ಪೊಲೀಸರು ಕಾನೂನು ಕ್ರಮ ಜರುಗಿಸಲು ಅನುವು ಮಾಡುವಂತೆ, ಇಲಾಖಾ ಅಭಿವೃದ್ಧಿ ಯೋಜನೆಗಳಲ್ಲಿ ಪಾರದರ್ಶಕತೆ ತರುವಂತೆ, ಜಿಲ್ಲೆಯಲ್ಲಿ ಸೂಕ್ತ ಕಲಾಭವನಗಳು, ಕಾರ್ಯ ಕ್ರಮಗಳನ್ನು ಆಯೋಜಿಸುವಂತೆ, ವಾಹನ ಬಹುನಿಲುಗಡೆ, ಕೇಬಲ್ ಕಾರ್, ಟೆಲಿ ಟೂರಿಜಂ ಆರಂಭಿಸು ವಂತೆ ಮನವಿ ಮಾಡಲಾಯಿತು.
ಅಸೋಸಿಯೇಷನ್‍ನ ಸಮಿತಿ ಸದಸ್ಯರಾದ ಕೆ.ಎಂ. ಕರುಂಬಯ್ಯ, ನವೀನ್ ಅಂಬೆಕಲ್ ಮತ್ತು ಮಿಕ್ಕಿಕಾಳಪ್ಪ ಉಪಸ್ಥಿತರಿದ್ದರು. ಪ್ರವಾಸೋದ್ಯಮ ನೀತಿಗೆ ಅಂತಿಮ ರೂಪು ನೀಡುವ ಮೊದಲು ಸಮಿತಿಯವರನ್ನು ಆಹ್ವಾನಿಸುವುದಾಗಿ ಸಚಿವ ಸಿ.ಟಿ. ರವಿ ಹೇಳಿದರು.
ಎರಡು ದಿನದ ಕಾರ್ಯಾಗಾರದಲ್ಲಿ ಸಚಿವ ರವಿ ಅವರೊಂದಿಗೆ ವಿವಿಧ ಇಲಾಖೆಗಳ ನಿರ್ದೇಶಕರುಗಳು ಮತ್ತು ಕಾರ್ಯದರ್ಶಿಗಳು ಹಾಜರಿದ್ದರು. ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ವಿವಿಧ ಸಂಘಟನೆಗಳು, ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.