ಸೋಮವಾರಪೇಟೆ, ಜ.8: ತಾಲೂಕಿನ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಹಲಸಿನಮರ ಶ್ರೀಮತಿ ಗೌರಮ್ಮ ಮತ್ತು ಶಾಂತಮಲ್ಲಪ್ಪ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ಅರಿವು ಮಾಲಿಕೆ-3 ಕಾರ್ಯಕ್ರಮ ತಾ.11ರಂದು ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಲಿದೆ ಎಂದು ವಿದ್ಯಾ ಸಂಸ್ಥೆಯ ಅಧ್ಯಕ್ಷ ಹೆಚ್.ಎಸ್. ಚಂದ್ರಮೌಳಿ ತಿಳಿಸಿದ್ದಾರೆ.
ತಾ.11ರಂದು ಪೂರ್ವಾಹ್ನ 11ರಿಂದ ರಾತ್ರಿ 8.30ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಕೆನಡಾದ ಇಂಡಿಯಾ ಅಬ್ಸರ್ವರ್ ಪತ್ರಿಕೆಯ ಸಂಪಾದಕ ನಾಗರಾಜು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗಂಗಾ ಸಮಾಜದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಸಾಂಸ್ಕೃತಿಕವಾಗಿ ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಪ್ರತಿ ತಿಂಗಳು ಆಯೋಜಿಸಲಾಗುವ ‘ಅರಿವು’ ವಿಶೇಷ ಕಾರ್ಯಕ್ರಮ ತಾ. 11ರಂದು ಅಪರಾಹ್ನ 3 ಗಂಟೆಗೆ ನಡೆಯಲಿದೆ.
ಕನ್ನಡ ಚಲನ ಚಿತ್ರರಂಗದ ಹೆಸರಾಂತ ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಅವರುಗಳು ಭಾಗವಹಿಸಿ, ತಮ್ಮ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.
ದ.ರಾ. ಬೇಂದ್ರೆ ಅವರು ಬರೆದಿರುವ, ಮಂಡ್ಯ ರಮೇಶ್ ನಿರ್ದೇಶಿಸಿರುವ ‘ಸಾಯೋ ಆಟ’ ನಾಟಕವನ್ನು ಕಲಾವಿದರು ಪ್ರಸ್ತುತಪಡಿಸಲಿದ್ದು, ಬದುಕು-ಕಲೆ ವಿಷಯದ ಬಗ್ಗೆ ಮಂಡ್ಯ ರಮೇಶ್, ಬದುಕು-ಸಂಗೀತ ವಿಷಯದ ಬಗ್ಗೆ ಸಾಧು ಕೋಕಿಲ ಅವರು ಕಾರ್ಯಕ್ರಮ ನೀಡಲಿದ್ದಾರೆ.
ವಿದ್ಯಾರ್ಥಿಗಳು ಮಾತ್ರವಲ್ಲದೇ ಸಾರ್ವಜನಿಕರಲ್ಲೂ ಸಹ ಸಾಂಸ್ಕೃತಿಕ,ರಾಜಕೀಯ, ವೈಚಾರಿಕ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ “ಅರಿವು” ಮಾಲಿಕೆಯನ್ನು ಕಾಲೇಜಿನಲ್ಲಿ ಪ್ರತಿ ತಿಂಗಳು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಚಂದ್ರಮೌಳಿ ತಿಳಿಸಿದ್ದಾರೆ.