ಮಡಿಕೇರಿ, ಜ. 8: ರಾಜ್ಯ ಸಾರಿಗೆ ಬಸ್‍ವೊಂದರ ಚಾಲಕನಿಗೆ ತಾ. 16.5.2017 ರಂದು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಆರೋಪಿಗೆ ಇಲ್ಲಿನ ಪ್ರಧಾನ ಜೆಎಂಎಫ್‍ಸಿ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.

ನಾಪೋಕ್ಲು ನಿವಾಸಿ ಎಂ. ಅಬ್ದುಲ್ ಖಾದರ್ ಎಂಬಾತ ರಾಜ್ಯ ಸಾರಿಗೆ ಬಸ್ ಚಾಲಕ ಗುರು ಸಂಗಪ್ಪ ಅವರಿಗೆ ಮೇಲ್ಕಾಣಿಸಿದ ದಿನಾಂಕದಂದು ಬಸ್ ನಿಲುಗಡೆ ವಿಚಾರದಲ್ಲಿ ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಪೊಲೀಸ್ ಮೊಕದ್ದಮೆ ದಾಖಲಾಗಿತ್ತು. ಈ ಬಗ್ಗೆ ಪ್ರಧಾನ ಜೆಎಂಎಫ್‍ಸಿ ನ್ಯಾಯಾಧೀಶರಾದ ಬಿ.ಕೆ. ಮನು ತೀರ್ಪು ನೀಡಿ, ಆರೋಪಿಗೆ ರೂ. 4 ಸಾವಿರ ದಂಡ ವಿಧಿಸಿದ್ದಾರೆ. ಈ ಮೊತ್ತದಲ್ಲಿ ರೂ. 3 ಸಾವಿರವನ್ನು ಬಸ್ ಚಾಲಕ ಗುರು ಸಂಗಪ್ಪ ಅವರಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿಸಿದ್ದಾರೆ.

ಸರಕಾರಿ ಸಹಾಯಕ ಅಭಿಯೋಜಕ ಬಿ.ಎಸ್. ಸಂತೋಷ್ ವಕಾಲತ್ತು ವಹಿಸಿದ್ದರು.