ಕೂಡಿಗೆ, ಜ. 8: ಕೂಡಿಗೆಯ ಸೈನಿಕ ಶಾಲೆಯ ನೂತನ ಪ್ರಾಂಶುಪಾಲರಾಗಿ ಗ್ರೂಪ್ ಕ್ಯಾಪ್ಟನ್ ಉಜ್ವಲ್ ಘೋರ್ಮಡೆಯವರು ಅಧಿಕಾರ ಸ್ವೀಕರಿಸಿದ್ದಾರೆ. ನೂತನ ಪ್ರಾಂಶುಪಾಲರು ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವುದರ ಮೂಲಕ ಗೌರವ ಸಲ್ಲಿಸಿದರು. ನಂತರ ಶಾಲೆಯ ಜೆಡಿ ಎನ್.ಸಿ.ಸಿ. ಘಟಕದ ವತಿಯಿಂದ ಪೆರೇಡ್ ನಾಯಕ ಕೆಡೆಟ್ ನರೇಂದ್ರ ರೋಡಗಿ ಹಾಗೂ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಶಾಲೆಯ ಉಪಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿಯವರು ನೂತನ ಪ್ರಾಂಶುಪಾಲರ ಕಿರು ಪರಿಚಯ ಮಾಡಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಆರ್.ಕೆ.ಡೇ, ಹಿರಿಯ ಶಿಕ್ಷಕ ಎಸ್. ಸೂರ್ಯನಾರಾಯಣ, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.