ಸುಂಟಿಕೊಪ್ಪ,ಜ.8: ಜನಪ್ರತಿ ನಿಧಿಗಳು ಅಧಿಕಾರಿಗಳು ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡದಿದ್ದಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಮೂಲಭೂತ ಸೌಕರ್ಯ ಒದಗಿಸಿದರೂ ಸ್ವಾರ್ಥಕ್ಕಾಗಿ ಅಡಚಣೆ ತರುವುದು ನಾಗರಿಕ ಸಮಾಜದ ಲಕ್ಷಣವೇ? ಹೀಗೊಂದು ಪ್ರಶ್ನೆ ಉದ್ಭವಾಗುತ್ತಿದೆ..!

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಪ್ಯಾಕೇಜ್‍ನಡಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದ ಯಡವಾರೆ ಶಾಲೆವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದರಲ್ಲೂ ಐಗೂರು ನಾಲೆಯ ಮೋರಿ ಕುಸಿದು ಸಂಚಾರಕ್ಕೆ ಅಡ್ಡಿಯಾಗಿತ್ತು. ಮೋರಿ ಕೆಲಸ ಕಾಮಗಾರಿ ಭರದಿಂದ ಸಾಗಿದ್ದು ಈಗ ಕ್ಯೂರಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ‘ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ’ ಎಂಬ ಬೋರ್ಡು ಹಾಕಲಾಗಿದ್ದರೂ; ಮೋರಿ ಬಳಿ ತಡೆ ನಿರ್ಮಿಸಿದರೂ ಕೆಲ ಆಟೋ ಚಾಲಕರು, ದ್ವಿಚಕ್ರ ಸವಾರರು ಅದನ್ನು ತೆರವುಗೊಳಿಸಿ ವಾಹನ ಚಾಲಿಸುತ್ತಿರುವುದು ದೌರ್ಭಾಗ್ಯವೇ ಸರಿ.!

ರಸ್ತೆ ಕಾಮಗಾರಿ ಪೂರ್ಣಗೊಂಡು ಕ್ಯೂರಿಂಗ್ ಆದ ನಂತರ ಆಟೋಚಾಲಕರಿಗೆ ಈ ರಸ್ತೆಗಾಗಿ ಸಂಚರಿಸುವ ವ್ಯವಧಾನವೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.