ಸಿದ್ದಾಪುರ, ಜ.8: ಪೌರತ್ವ ತಿದ್ದುಪಡಿ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ಅಥವಾ ಹಿಂದೂ ಮತ್ತು ಮುಸ್ಲಿಂ ನಡುವಿನ ವಿಚಾರ ಅಲ್ಲ. ಭಾರತೀಯ ನಾಗರಿಕರು ಮತ್ತು ಸರಕಾರ ನಡುವಿನ ವಿಚಾರವಾಗಿದೆ ಎಂದು ಹಿರಿಯ ಪತ್ರಕರ್ತ ಬಿ.ಎಂ ಹನೀಫ್ ಅಭಿಪ್ರಾಯಪಟ್ಟರು.

ಕೊಂಡಂಗೇರಿಯ ಶಾದಿ ಮಹಲ್‍ನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲೆಯ ಅಧ್ಯಕ್ಷÀ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೊಸ್ ಕಿಲ್ಲೂರು ಅಧ್ಯಕ್ಷತೆಯಲ್ಲಿ ನಡೆದ ಸಿ.ಎ.ಎ, ಎನ್.ಆರ್.ಸಿ, ಎನ್.ಪಿ.ಆರ್ ಕಾರಣ ಮತ್ತು ಪರಿಣಾಮಗಳು ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ಜಾರಿಗೆ ತಂದಿರುವ ವಿಧಾನ ಹಾಗೂ ಇದರಲ್ಲಿ ಎದ್ದಿರುವ ಪ್ರಶ್ನೆಗಳಲ್ಲಿ ತುಂಬಾ ಅನುಮಾನಗಳಿದೆ. ಅನುಮಾನಗಳನ್ನು ಸರಕಾರ ಮುಂದೆ ನಿಂತು ಪರಿಹರಿಸಬೇಕಾಗಿದೆ. ಸರಕಾರ ಎಲ್ಲಾ ಪ್ರಜೆಗಳಿಗೂ ಸೇರಿದ್ದಾಗಿದೆ. ಅನುಮಾನಗಳ ಬಗ್ಗೆ ಸರಕಾರ ಅಧಿಕಾರಿ ಗಳ ಮೂಲಕ ಪಾರದರ್ಶಕವಾಗಿ ಜನರಿಗೆ ತಿಳಿ ಹೇಳಬೇಕಾಗಿದೆ.

ಜನರ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿದೆ. ಇದು ಸರಕಾರದಿಂದ ನಡೆಯುತ್ತಿಲ್ಲ. ಪರಿಣಾಮವಾಗಿ ಪೌರತ್ವ ವಿಚಾರವು ಕಾಂಗ್ರೆಸ್ ಮತ್ತು ಬಿಜೆಪಿ, ಹಿಂದೂ ಮತ್ತು ಮುಸ್ಲಿಂ ವಿಚಾರವಾಗಿ ಪರಿವರ್ತನೆಯಾಗುತ್ತಿದೆ. ಆದರೆ ಈ ಸಮಸ್ಯೆಯು ಭಾರತೀಯ ನಾಗರಿಕರು ಮತ್ತು ಭಾರತ ಸರಕಾರದ ವಿಚಾರವಾಗಿದೆ ಎಂದರು. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಅಂಶಗಳಿರುವುದರಿಂದ ಇದರ ಬಗ್ಗೆ ಬಹಳ ಚರ್ಚೆಗಳು ನಡೆಯಬೇಕಾಗಿದೆ. ಸಂಶಯಗಳನ್ನು ನಿವಾರಿಸಲು ರಾಜಕೀಯ ವ್ಯಕ್ತಿಗಳ ಬದಲಾಗಿ ಅಧಿಕಾರಿಗಳ ಮೂಲಕ ಸರಕಾರ ಮುಂದಾಗಬೇಕಾಗಿತ್ತು ಎಂದರು. ಪೌರತ್ವಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‍ನಲ್ಲಿ ಇರುವಾಗ ಸರಕಾರ ಇಷ್ಟು ಅವಸರ ಮಾಡಬೇಕಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಇದು ರಾಜಕೀಯ ವಿಷಯವಲ್ಲ, ಭಾರತೀಯ ನಾಗರಿಕರ ವಿಷಯವಾಗಿದೆ ಎಂದರು. ಈ ಕಾಯ್ದೆ ಸಂವಿಧಾನ ಬದ್ದವಾಗಿದ್ದರೆ ಜಾರಿ ಮಾಡುವ ಬಗ್ಗೆಯೂ ಹಾಗೂ ಸಂವಿಧಾನ ವಿರೋಧಿಯಾಗಿದ್ದರೆ ಕಾನೂನು ರೀತಿಯಲ್ಲಿ ಎದುರಿಸುವ ಬಗ್ಗೆಯೂ ಚರ್ಚೆಗಳು ನಡೆಯಬೇಕೆಂದರು.

ಕೊಡಗು ಜಿಲ್ಲೆ ನಾಯಿಬ್ ಖಾಝಿ ಮಹಮೂದ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಿದರು. ಕುಂಜಿಲ ಮುದರಿಸ್ ಮುಬಶಿರ್ ಅಹ್ಸನಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ, ವಕೀಲ ಕುಞÂ ಅಬ್ದುಲ್ಲಾ, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ. ಯಾಕೂಬ್, ಪಿ.ಯು ಹನೀಫ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲೆ ಕಾರ್ಯಾಧ್ಯಕ್ಷ ಪಿ.ಎ ಯೂಸುಫ್, ಜಿಲ್ಲಾ ಪಂಚಾಯತಿ ಸದಸ್ಯ ಅಬ್ದುಲ್ ಲತೀಫ್, ಸುಲೈಮಾನ್ ಪಾಳಿಲಿ, ಅಬ್ದುಲ್ಲ ಸಖಾಫಿ, ಅಬ್ದುಲ್ ಅಜೀಜ್ ಸಖಾಫಿ, ಉಸ್ಮಾನ್ ಸುಂಟಿಕೊಪ್ಪ ಸೇರಿದಂತೆ ಮತ್ತಿತರರು ಇದ್ದರು.