ಮಡಿಕೇರಿ, ಜ. 8: ಕಳೆದ ತಿಂಗಳು ಅಮಾವಾಸ್ಯೆಯ ದಿನದಂದು ನಡೆದ ಅಪರೂಪದ ಸೂರ್ಯಗ್ರಹಣದಲ್ಲಿ ಚಂದ್ರನು ಭೂಮಿ ಹಾಗೂ ಸೂರ್ಯನ ನಡುವೆ ಬಂದು ಆಕರ್ಷಕವಾದ ಕಂಕಣ ಆಕಾರದ ಸೂರ್ಯನನ್ನು ಸೃಷ್ಟಿಸುವಂತೆ ಮಾಡಿತ್ತು. ಇದೀಗ 15 ದಿನಗಳ ನಂತರ ಭೂಮಿಗೆ ಅರ್ಧ ಪ್ರದಕ್ಷಿಣೆ ಹೊಡೆದು ತಾ.10ರ (ನಾಳೆಯ) ಹುಣ್ಣಿಮೆಯ ದಿನದಂದು ಸೂರ್ಯ ಹಾಗೂ ಭೂಮಿಯ ಹಿಂದೆ ಚಂದ್ರನು ಒಂದೇ ಸಾಲಿನಲ್ಲಿ ಬಂದು ಕೂರಲಿದ್ದಾನೆ.

ಅರೆ ನೆರಳು (ಠಿeಟಿumbಡಿಚಿ)

ನಾಳೆಯ ಗ್ರಹಣದಲ್ಲಿ ಭೂಮಿಯ ಪೂರ್ತಿ ನೆರಳು (umbಡಿಚಿ) ಚಂದ್ರನ ಮೇಲೆ ಬೀಳುವುದಿಲ್ಲ, ಬದಲಿಗೆ ಚಿತ್ರದಲ್ಲಿ ತೋರಿಸಿದಂತೆ ಅರೆ ನೆರಳು ಬೀಳಲಿದೆ. ಪೂರ್ತಿ ನೆರಳಿನ ಗ್ರಹಣಕ್ಕಿಂತ ಈ ಗ್ರಹಣವನ್ನು ನೋಡಲು ಸ್ವಲ್ಪ ಕಷ್ಟ, ಏಕೆಂದರೆ ನೆರಳಿನ ದಟ್ಟತನ ಸ್ವಲ್ಪ ಕಡಿಮೆ ಇರುತ್ತದೆ.

ಏಷಿಯಾ, ಆಫ್ರಿಕಾ ಹಾಗೂ ಯೂರೋಪ್‍ನಲ್ಲಿರುವ ದೇಶಗಳಲ್ಲಿ ಗ್ರಹಣವು ಕಾಣಿಸಿಕೊಳ್ಳಲಿದ್ದು, ಜಿಲ್ಲೆಯಲ್ಲೂ ಇದರ ವೀಕ್ಷಣೆ ಮಾಡಬಹುದಾಗಿದೆ. ತಾ. 10 (ನಾಳೆ) ರಾತ್ರಿ 10:37ಕ್ಕೆ ಪ್ರಾರಂಭಗೊಂಡು ನಡುರಾತ್ರಿ ಕಳೆದು 12:40ಕ್ಕೆ ಶೇಕಡ 90 ರಷ್ಟು ಭೂಮಿಯ ಅರೆ ನೆರಳು ಚಂದ್ರನ ಮೇಲೆ ಬೀಳಲಿದೆ. ನಂತರ ಭೂಮಿಯ ನೆರಳಿನಿಂದ ಚಂದ್ರನು ಬಿಡುಗಡೆಗೊಳ್ಳುತ್ತ 2:42 ಗಂಟೆಯವರೆಗೆ ಗ್ರಹಣ ನಡೆಯಲಿದೆ. ಒಟ್ಟು 4 ಗಂಟೆ 5 ನಿಮಿಷಗಳ ಕಾಲ ಗ್ರಹಣ ನಡೆಯಲಿದೆ. ಚಂದ್ರ ಗ್ರಹಣವನ್ನು ಬರಿ ಕಣ್ಣಿನಿಂದ ಯಾವುದೇ ತೊಂದರೆಗಳಿಲ್ಲದೆ ನೋಡಬಹುದಾಗಿದೆ.

-ಪ್ರಜ್ವಲ್ ಜಿ.ಆರ್.