ಕೂಡಿಗೆ, ಜ. 7 : ಹಾರಂಗಿ ಜಲಾಶಯದ ಮುಂಭಾಗದಲ್ಲಿರುವ ಉದ್ಯಾನವನವನ್ನು ಹಾರಂಗಿ ತೋಟಗಾರಿಕಾ ಇಲಾಖೆಗೆ ವಹಿಸುವುದರ ಮೂಲಕ ಅಭಿವೃದ್ಧಿ ಪಡಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದ್ದು, ಹಾರಂಗಿ ತೋಟಗಾರಿಕಾ ಇಲಾಖೆ ವತಿಯಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಪ್ರಮುಖ ಆಕರ್ಷಣೀಯ ಕೇಂದ್ರವಾಗಿರುವ ಹಾರಂಗಿಗೆ ಈಗಾಗಲೇ ಸಾವಿರಾರು ಪ್ರವಾಸಿಗರು ಬರುವುದರಿಂದ ಅಲ್ಲಿನ ಉದ್ಯಾನವನದ ಜವಬ್ದಾರಿಯನ್ನು ತೋಟಗಾರಿಕೆ ವಹಿಸಿದ್ದಲ್ಲಿ ಇಲಾಖೆಯ ತಾಂತ್ರಿಕ ಪರಿಣಿತ ಸಿಬ್ಬಂದಿ ವರ್ಗ ಇರುವುದರಿಂದ ಉದ್ಯಾನವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಗು ತ್ತದೆ. ಈಗಾಗಲೇ ಹಾರಂಗಿಯಲ್ಲಿರುವ 173 ಎಕರೆ ಪ್ರದೇಶದಲ್ಲಿ 75 ಎಕರೆ ಪ್ರದೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಅನುದಾನದಲ್ಲಿ ಅಭಿವೃದ್ಧಿಗೊಂಡಿದೆ. ಅದರಂತೆ ಇನ್ನುಳಿದ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತೋಟ ಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸಿ ಕೇಂದ್ರಗಳ ಉದ್ಯಾನವನವಗಳ ಜವಬ್ದಾರಿಯನ್ನು ತೋಟಗಾರಿಕಾ ಇಲಾಖೆಯೇ ವಹಿಸಿಕೊಂಡಿದ್ದು, ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ. ಹೊಸ ಹೊಸ
(ಮೊದಲ ಪುಟದಿಂದ) ತಂತ್ರಜ್ಞಾನಗಳನ್ನು ಬಳಸಿಕೊಂಡು ಅತ್ಯಾಕರ್ಷಕವಾಗಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಿವೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲಿರುವ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿ ಹೆಚ್ಚಿನ ಜನಾಕರ್ಷಣೆಯವಾಗಿರುವ ಉದ್ಯಾನವನ್ನು ತೋಟಗಾರಿಕಾ ಇಲಾಖೆಯು ವಹಿಸಿಕೊಂಡು ತಮ್ಮ ತೋಟಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿರುವ ಮಾದರಿಯಲ್ಲೇ ಉದ್ಯಾನವನ್ನು ಅಭಿವೃದ್ಧಿ ಪಡಿಸುವಂತೆ ಚಿಂತನೆ ನಡೆಸಲಾಗಿದೆ. ತೋಟಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಳಾವಕಾಶ ಇರುವುದರಿಂದ ಈ ಪ್ರದೇಶಲ್ಲಿ ತೋಟಗಾರಿಕಾ ತರಬೇತಿ ಕೇಂದ್ರವನ್ನು ತೆರೆಯುವ ಮೂಲಕ ಜಿಲ್ಲೆಯ ಯುವಕರಿಗೆ ತೋಟಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾದಂತಾಗುತ್ತದೆ ಎಂದರು.
ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು, ಹೆಚ್ಚು ಅನುದಾನವನ್ನು ನೀರಾವರಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಗೆ ಬಿಡುಗಡೆಗೊಳಿಸಲು ಒತ್ತಾಯಿಸಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಹಾರಂಗಿ ಅಣೆಕಟ್ಟೆಯ ಅಭಿವೃದ್ಧಿ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಇನ್ನಿತರ ಇಲಾಖೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದ್ದು, ಅವರ ಸೂಚನೆಯ ಮೇರೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ವರದರಾಜ್ ತಿಳಿಸಿದರು.
ಇದರೊಂದಿಗೆ ತೋಟಗಾರಿಕಾ ಕ್ಷೇತ್ರದಲ್ಲಿ 5 ಲಕ್ಷ ಕಾಳು ಮೆಣಸು ಬಳ್ಳಿಗಳನ್ನು ಬೆಳೆಸಲು ಚಿಂತಿಸಲಾಗಿದ್ದು, ಈಗಾಗಲೇ ವಿಯಾಟ್ನಾಂ ಮಾದರಿಯಲ್ಲಿ 1.5 ಲಕ್ಷ ಕಾಳು ಮೆಣಸು ಬಳ್ಳಿಗಳನ್ನು ಬೆಳೆಸಲಾಗಿದೆ. ಇನ್ನು ಮುಂದೆ 5 ಲಕ್ಷ ಬಳ್ಳಿಗಳನ್ನು ಬೆಳೆದು ಜಿಲ್ಲೆಯ ರೈತರಿಗೆ ವಿತರಣೆ ಮಾಡಲು ಚಿಂತಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕಾ ಇಲಾಖೆಯಡಿಯಲ್ಲಿ ತೆಂಗನ್ನು ಬೆಳೆಯಲಾಗಿದೆ. ಮುಂದಿನ ಮುಂಗಾರು ಸಂದರ್ಭದಲ್ಲಿ ರೈತರಿಗೆ ವಿತರಣೆ ಮಾಡಲು ಸಿದ್ಧಗೊಂಡಿವೆ ಎಂದು ತಿಳಿಸಿದರು. -ನಾಗರಾಜ ಶೆಟ್ಟಿ