ಮಡಿಕೇರಿ, ಜ. 7: ಹಾಕಿಯ ತವರೂರು ಎಂಬ ಹಿರಿಮೆಯ ಕೊಡಗು ಜಿಲ್ಲೆಯ ಹಾಕಿ ಅಭಿಮಾನಿಗಳು, ಹಾಕಿ ಆಟಗಾರರು, ತೀರ್ಪುಗಾರರು, ತಾಂತ್ರಿಕ ಸಮಿತಿಯವರು ಹೀಗೆ ಎಲ್ಲರಿಗೂ ಇದೊಂದು ಆಘಾತಕಾರಿ ಸುದ್ದಿಯಾಗಿದೆ. ದೇಶದಲ್ಲಿ ಹಾಕಿಗೆ ಸಂಬಂಧಿಸಿದಂತೆ ಇರುವ ಹಾಕಿ ಇಂಡಿಯಾ ರಾಷ್ಟ್ರವ್ಯಾಪಿಯಾಗಿ ಹೊಸದಾದ ನಿಯಮವೊಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ. ಭಾರತ ಸರಕಾರದ ಅಧೀನದ ಅಧಿಕೃತ ಸಂಸ್ಥೆಯಾದ ಹಾಕಿ ಇಂಡಿಯಾ ಇದೀಗ ಕೈಗೊಂಡಿರುವ ಹೊಸ ನಿರ್ಧಾರದಿಂದಾಗಿ ಈ ಹಿಂದೆ ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನ್ಯತೆ ಪಡೆದಿದ್ದ ಹಲವು ತಂಡಗಳ ಈ ರಾಷ್ಟ್ರೀಯ ಮಾನ್ಯತೆ ರದ್ದುಗೊಳ್ಳಲಿದೆ. ಇದರಂತೆ ದೇಶದ ಹಲವು ಇಂತಹ ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ.ಹಾಕಿಗೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಕಳೆದ ಮೂರು ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಸಂಸ್ಥೆಯಾದ ಹಾಕಿ ಕೂರ್ಗ್, ಬೆಂಗಳೂರು ಹಾಕಿ ಸಂಸ್ಥೆ ಸೇರಿದಂತೆ ರಾಷ್ಟ್ರದ ವಿವಿಧ ರಾಜ್ಯಗಳ ಹಲವು ಸಂಸ್ಥೆಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ಹಿಂಪಡೆಯಲು ಹಾಕಿ ಇಂಡಿಯಾ ನಿರ್ಧರಿಸಿದ್ದು; 2020ರ ಜುಲೈ ಒಂದರಿಂದ ಈ ಸಂಸ್ಥೆಗಳು ಇನ್ನು ಮುಂದೆ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತವಾಗಲಿವೆ.2016ರಲ್ಲಿ ಹಾಕಿ ಇಂಡಿಯಾದ ಮೂಲಕ ಕೊಡಗು ಜಿಲ್ಲೆಯ ಸಂಸ್ಥೆಯಾದ ಹಾಕಿ ಕೂರ್ಗ್ನ ತಂಡವೂ ಬಾಲಕ - ಬಾಲಕಿಯರ ವಿಭಾಗದ ಸಬ್ಜೂನಿಯರ್, ಜೂನಿಯರ್, ಪುರುಷ - ಮಹಿಳೆಯರ ತಂಡ ಹೀಗೆ ಹಾಕಿಯ ಎಲ್ಲಾ ವಿಭಾಗದ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರತ್ಯೇಕ ತಂಡವಾಗಿ ಆಡುವ ಅಪರೂಪದ ಅವಕಾಶವನ್ನು ಪಡೆದುಕೊಂಡಿತ್ತು. ಕರ್ನಾಟಕ ರಾಜ್ಯದಲ್ಲಿ ಈ ಅವಕಾಶ ಅಧಿಕೃತವಾಗಿ ಪರಿಗಣಿಸಲ್ಪಟ್ಟಿದ್ದ ಹಾಕಿ ಇಂಡಿಯಾ ಅಧೀನದ ಹಾಕಿ ಕರ್ನಾಟಕ, ಬೆಂಗಳೂರು ಹಾಕಿ ಸಂಸ್ಥೆ (ಹಿಂದಿನ ಕೆಎಸ್ಎಚ್ಎ) ಹಾಗೂ ಇವುಗಳೊಂದಿಗೆ ಕೊಡಗು ಜಿಲ್ಲೆಗೆ ಪ್ರತ್ಯೇಕವಾಗಿ ಹಾಕಿ ಕೂರ್ಗ್ ಸಂಸ್ಥೆಗೆ ಲಭಿಸಿತ್ತು.
ಈ ರಾಷ್ಟ್ರೀಯ ಮಾನ್ಯತೆ ಪಡೆದ ಬಳಿಕ ಹಾಕಿ ಕೂರ್ಗ್ನ ವಿವಿಧ ವಿಭಾಗದ ತಂಡಗಳು ಈ ತನಕ ಹಲವಾರು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆಯನ್ನು ತೋರುತ್ತಾ ಬರುತ್ತಿತ್ತು. ಹಲವು ಪಂದ್ಯಾವಳಿಗಳಲ್ಲಿ ಪ್ರಶಸ್ತಿಗಳನ್ನೂ ಪಡೆದುಕೊಂಡಿತ್ತು. ಆದರೆ ಇದೀಗ ಪ್ರತ್ಯೇಕ ತಂಡವಾಗಿ ಪಾಲ್ಗೊಳ್ಳುವ ಅವಕಾಶಕ್ಕೆ ಹಾಕಿ ಇಂಡಿಯಾದಿಂದ ಹೊರಬಿದ್ದಿರುವ ಹೊಸ ಆದೇಶ ತಣ್ಣೀರೆರಚಿದಂತಾಗಿದೆ.
ಒಂದು ರಾಜ್ಯ ಒಂದು ಸಂಸ್ಥೆ ಮಾತ್ರ
ಕ್ರೀಡೆಗೆ ಸಂಬಂಧಿಸಿದ ರಾಷ್ಟ್ರೀಯ ಕ್ರೀಡಾಪ್ರಾಧಿಕಾರ, ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಈ ಹಿಂದಿನ ನಿರ್ಧಾರದಿಂದ ಬದಲಾವಣೆ ಮಾಡಿದ್ದು; ಇದೀಗ ‘ಒಂದು ರಾಜ್ಯ, ಒಂದು ಸಂಸ್ಥೆ’ ಎಂಬ ನಿಯಮಾವಳಿ ಜಾರಿಗೆ ತರುತ್ತಿದೆ. ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಂದು - ಎರಡು ಅಥವಾ ಇದಕ್ಕಿಂತ ಹೆಚ್ಚು ಸಂಸ್ಥೆಗಳಿಗೆ ಈ ಹಿಂದೆ ಮಾನ್ಯತೆ ನೀಡಲಾಗಿತ್ತು. ರಾಜ್ಯದ ತಂಡದೊಂದಿಗೆ ಇತರ ಸಂಸ್ಥೆಗಳನ್ನು ‘ಅಸೋಸಿಯೇಟ್ ಮೆಂಬರ್’ ಎಂದು ಹಾಕಿ ಇಂಡಿಯಾ ಪರಿಗಣಿಸಿತ್ತು. ಇದೀಗ ಹೊಸ ನಿರ್ಧಾರದಂತೆ; ಈಗಾಗಲೇ ಜೂನ್ 30ರ ತನಕ ಮಾತ್ರ ನಿಗದಿಯಾಗಿರುವ ವಿವಿಧ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಬಹುದಾಗಿದೆ.
ಆಟಗಾರರಿಗೆ ಹೊಡೆತ
ರಾಷ್ಟ್ರೀಯ ಮಾನ್ಯತೆ ಇನ್ನು ಒಂದು ರಾಜ್ಯದಿಂದ ಒಂದು ತಂಡಕ್ಕೆ (ರಾಜ್ಯದಲ್ಲಿ ಹಾಕಿ ಕರ್ನಾಟಕ) ಮಾತ್ರ ಇರಲಿದೆ. ಈ ತನಕ ಮೂರು ತಂಡಗಳಿಗೆ ಅವಕಾಶವಿದ್ದರಿಂದ ಒಂದು ಪಂದ್ಯಾವಳಿಯಲ್ಲಿ ಸುಮಾರು 50ಕ್ಕೂ ಅಧಿಕ ಆಟಗಾರರು ಸೇರಿದಂತೆ ತೀರ್ಪುಗಾರರಿಗೆ, ತಾಂತ್ರಿಕ ಸಮಿತಿಯವರಿಗೆ ಅವಕಾಶ ಸಿಗುತ್ತಿತ್ತು. ಹೊಸ ನಿಯಮ ಜಾರಿಯಿಂದ ಕೇವಲ 16 ಆಟಗಾರರು ಮಾತ್ರ ಪಾಲ್ಗೊಳ್ಳುವಂತಾಗಲಿದೆ. ಪ್ರತಿಭಾನ್ವಿತರಿಗೆ ಹಾಕಿಯಲ್ಲಿನ ಪಾಲ್ಗೊಳ್ಳುವಿಕೆಯಿಂದ; ಉದ್ಯೋಗವಕಾಶ, ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಈ ರೀತಿಯಲ್ಲಿ ಹಲವು ಅವಕಾಶಗಳು ಕೂಡ ಸಿಗುತ್ತಿದ್ದು; ಇನ್ನು ಇದಕ್ಕೆ ಹೊಡೆತಬೀಳಲಿದೆ.
(ಮೊದಲ ಪುಟದಿಂದ)
ಸದೃಢವಾದ ತಂಡ
ಆಂತರಿಕವಾಗಿ ಈ ಬದಲಾವಣೆಯಿಂದ ಸಮಸ್ಯೆ ಯಾಗಲಿರುವದು ಒಂದೆಡೆಯಾಗಿದೆ. ಆದರೆ ಇನ್ನು ಮುಂದೆ ಅತ್ಯುತ್ತಮ ಆಟಗಾರರು - ಪ್ರತಿಭೆಗಳಿಗೆ ಮಾತ್ರ ಅವಕಾಶ ಸಿಗಲಿದ್ದು; ಆಯಾ ರಾಜ್ಯದ ತಂಡದ ಆಯ್ಕೆ ದೇಶದ ತಂಡದ ಆಯ್ಕೆಯಲ್ಲಿ ಹೆಚ್ಚು ಪ್ರಾವಿಣ್ಯತೆ ಇರುವವರನ್ನು ಮಾತ್ರ ಕಾಣಬಹುದಾಗಿದ್ದು; ಗುಣಮಟ್ಟದ ಕಾರಣ ಇದರಲ್ಲಿದ್ದು, ಇದರಿಂದ ಹಾಕಿ ತಂಡ ಹೆಚ್ಚು ಸುಭದ್ರವಾಗಲಿದೆ ಎಂಬ ಅಭಿಪ್ರಾಯ ಮತ್ತೊಂದೆಡೆ ಯಾಗಿದೆ. ಹಾಕಿ ಇಂಡಿಯಾದ ಮೂಲಕ ಹೊಸ ಆದೇಶವನ್ನು ಈಗಾಗಲೇ ಸಂಬಂಧಿಸಿದ ಸಂಸ್ಥೆಗಳ ಅಧ್ಯಕ್ಷರುಗಳಿಗೆ ರವಾನಿಸಲಾಗಿದೆ.
ಆಂಧ್ರ ಹಾಕಿ ಅಸೋಸಿ ಯೇಷನ್, ಹಾಕಿ ಮಧ್ಯಭಾರತ್, ಹಾಕಿ ಭೂಪಾಲ್, ಹಾಕಿ ಗಂಗಾಪುರ್, ಒಡಿಶಾ, ಹಾಕಿ ಪಾಟಿಯಾಲ, ಬೆಂಗಳೂರು ಹಾಕಿ ಅಸೋಸಿಯೇಷನ್, ಹಾಕಿ ಕೂರ್ಗ್, ಹಾಕಿ ಹಿಮ್, ದಿ ಮುಂಬೈ ಹಾಕಿ ಅಸೋಸಿಯೇಷನ್ ಹಾಗೂ ವಿದರ್ಭ ಹಾಕಿ ಅಸೋಸಿಯೇಷನ್ಗಳ ರಾಷ್ಟ್ರೀಯ ಮಾನ್ಯತೆ ಜುಲೈ 1 ರಿಂದ ರದ್ದುಗೊಳ್ಳುತ್ತಿದೆ.
ಇವುಗಳು ಈ ತನಕ ಹೆಚ್ಚುವರಿ ಸಂಸ್ಥೆಗಳಾಗಿ ಮಾನ್ಯತೆ ಹೊಂದಿ ದ್ದವು. ಇದೀಗ ಈ ರಾಜ್ಯಗಳ ಒಂದೇ ಸಂಸ್ಥೆಯಾಗಿ ಹಾಕಿ ಆಂಧ್ರಪ್ರದೇಶ, ಹಾಕಿ ಮಧ್ಯಪ್ರದೇಶ, ಹಾಕಿ ಒಡಿಶಾ, ಹಾಕಿ ಪಂಜಾಬ್, ಹಾಕಿ ಕರ್ನಾಟಕ, ಹಾಕಿ ಹಿಮಾಚಲ ಹಾಗೂ ಹಾಕಿ ಮಹಾರಾಷ್ಟ್ರ ತಂಡಗಳಿಗೆ ಮಾತ್ರ ಅವಕಾಶ ವಿರಲಿದ್ದು; ಇತರ ಸಂಸ್ಥೆಗಳು ಕೇವಲ ಜಿಲ್ಲಾ ಮಟ್ಟದ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತಾಗಲಿದೆ.