ಮಡಿಕೇರಿ, ಜ. 7: ಸಂತ ಮೈಕಲರ ಶಾಲೆ ಆವರಣದಲ್ಲಿ ಓಡಿಪಿ ಸಂಸ್ಥೆ ಮೈಸೂರಿನಿಂದ ಹೆಚ್.ಐ.ವಿ. ಸೋಂಕಿತ ಸ್ನೇಹಾಶ್ರಯ ಸಮಿತಿಯ 30 ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಓಡಿಪಿ ಸಂಸ್ಥೆಯ ನಿರ್ದೇಶಕ ರೆ.ಫಾ. ಅಲೆಕ್ಸ್ ಪ್ರಶಾಂತ್ ಸಿಕ್ವೆರ ಮಾತನಾಡಿ ನಾವು ದೃತಿಗೆಡದೆ ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಜೀವನ ನಡೆಸೋಣ. ಆರ್ಥಿಕವಾಗಿ ಹೆದರುವ ಅವಶ್ಯಕತೆ ಇಲ್ಲ. ನಾವೆಲ್ಲರೂ ನಿಮಗಾಗಿ ಶ್ರಮಿಸುತ್ತೇವೆ. ನಿಮ್ಮ ಸೇವೆ ಮಾಡಲು ನಾವೆಲ್ಲರೂ ಸದಾಸಿದ್ಧ. ನೀವು ಧೈರ್ಯವಾಗಿ ಸಂತೋಷದಿಂದ ಮುಂದಿನ ಜೀವನ ನಡೆಸಿ, ದೇವರು ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆಶೀರ್ವದಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ ಕೇಕ್ ಕಟ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿ, ಇರುವಷ್ಟು ದಿನ ಎಲ್ಲರೂ ಜೊತೆ ಜೊತೆಯಾಗಿ ಸಂತೋಷದಿಂದ ನಗುತ್ತಾ ಕುಟುಂಬದೊಂದಿಗೆ ಇರಬೇಕು. ಆಗ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹೊಸ ವರ್ಷದಲ್ಲಿ ಹೊಸ ಬೆಳಕು, ಹೊಸ ಉಲ್ಲಸ, ಹೊಸ ಹುಮ್ಮಸ್ಸು, ಹೊಸ ನೆನಪು ಹೊಸತನ ಜೀವನದಲ್ಲಿ ತರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ನೂರುನ್ನೀಸಾ ಅವರು ಹೆಚ್‍ಐವಿ ಸೋಂಕಿತರಿಗೆ ಸರಕಾರದಿಂದ ಅನೇಕ ಸೌಲಭ್ಯಗಳಿವೆ. ಅಲ್ಲಿ ಸಿಗದಿದ್ದರೆ ನಮ್ಮ ಪ್ರಾಧಿಕಾರದಿಂದ ಸವಲತ್ತು ಕೊಡಲು ನಾವು ಸಹಕರಿಸುತ್ತೇವೆ. ಮಕ್ಕಳ ತಾರತಮ್ಯ ಮಾಡಬಾರದು. ನಮ್ಮಲ್ಲಿ ಒಬ್ಬರಂತೆ ಕಾಣಬೇಕು. ತಂದೆ-ತಾಯಿ ಮಕ್ಕಳು ಕುಟುಂಬದಲ್ಲಿ ಸಂತೋಷ, ನೆಮ್ಮದಿಯಿಂದ ಬಾಳಬೇಕು. ನಗು ನಗುತ ಜೀವನ ಸಾಗಿಸಬೇಕು. ಬೇರೆಯವರಿಗೆ ಮಾದರಿಯಾಗಿರ ಬೇಕು. ಓಡಿಪಿ ಸಂಸ್ಥೆಯ ಜನಸೇವೆ ಕಾರ್ಯಕ್ರಮದಲ್ಲಿ ನಾವು ಕೂಡ ನಿಮ್ಮ ಜೊತೆ ಕೈಜೋಡಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ್ ನಾಬಾರ್ಡ್ ಡಿ.ಡಿ.ಎಂ., ಸ್ನೇಹಾಶ್ರಯ ಸಮಿತಿ ಕಾರ್ಯಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯೂ, ಓಡಿಪಿ ಸಂಯೋಜಕ ಮೇಲಿ ಪೊಡ್ತಾದೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಸುನಿತ, ಓಡಿಪಿ ಸಂಸ್ಥೆಯ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮಿನಿಜೇಸ್, ಗುತ್ತಿಗೆದಾರ ಸುಜಾಯ್ ಇದ್ದರು. ವಿಜಯ ಸ್ವಾಗತಿಸಿದರೆ, ಜಯಪ್ಪ ವಂದಿಸಿದರು.