ಕೆಲವರಿಗೆ ಜೀವಮಾನವಿಡೀ ನಿರಂತರವಾಗಿ ದುಡಿದರೂ ಇಷ್ಟೊಂದು ಹಣ ಒಂದೇ ಬಾರಿ ದೊರೆಯುವು ದಿಲ್ಲ. ಆದರೆ, ತುಮಕೂರಿನ ರೈತನಿಗೆ ಹಳೆ ಹಲಸಿನ ಮರವು ಕುಳಿತಲ್ಲಿಗೆ ರೂಪಾಯಿ 10 ಲಕ್ಷ ವರಮಾನವನ್ನು ವರದಾನದ ರೂಪದಲ್ಲಿ ನೀಡಿದೆ. ವಿಚಿತ್ರವೆನಿಸಿದರೂ, ಇದು ಸತ್ಯ.
ತುಮಕೂರು ಜಿಲ್ಲೆಯ ಚೇಳೂರು ಗ್ರಾಮದ ರೈತ ಎಸ್. ಪರಮೇಶ್ವರ ಅವರ ಹೊಲದಲ್ಲಿರುವ ಪುರಾತನ ಹಲಸಿನ ಮರವು ಅಸಾಮಾನ್ಯ ಹಣ್ಣುಗಳನ್ನು ಬಿಡುತ್ತಿದೆ. ಪರಿಣಾಮ ದಿಡೀರ್ ವಿಶ್ವಪ್ರಸಿದ್ಧಿಯಾಗಿದೆ. ಈ ಮರದ ಮಾಲೀಕ ಪರಮೇಶ್ವರ ಅವರಿಗೆ “ಪುರಾತನ ಸಸ್ಯ ಪ್ರಭೇಧ ರಕ್ಷಕ” ಎಂಬ ಪಟ್ಟವು ಪ್ರಾಪ್ತಿಯಾಗಿದೆ. ಇವರ ಜಮೀನಿನಲ್ಲಿರುವ ಮರವು ದೇಶದಾದ್ಯಂತ ಇರುವ ಸಸ್ಯಶಾಸ್ತ್ರಜ್ಞರ ಗಮನ ಸೆಳೆದಿದೆ. ಈ ಅಪೂರ್ವ ಮರವನ್ನು ಸಂರಕ್ಷಿಸಿರುವುದಕ್ಕಾಗಿ ಪರಮೇಶ್ವರ್ ಅವರನ್ನು ರಾಷ್ಟ್ರಮಟ್ಟದ ಪ್ರಶಸ್ತಿಗಳು ಅರಸುತ್ತಾ ಬಂದಿವೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೇಂದ್ರ ತೋಟಗಾರಿಕಾ ಕೇಂದ್ರದ ವಿಜ್ಞಾನಿಗಳಾದ ಡಾ. ಕರುಣಾಕರ್ ಅವರ ತಂಡ ಈ ಅಸಾಮಾನ್ಯ ಮರವನ್ನು ಪತ್ತೆ ಹಚ್ಚಿದರು. ಈ ಮರದಲ್ಲಿ ಬಿಡುವ ಹಲಸಿನ ಹಣ್ಣಿನ ತೊಳೆಗಳು ತಾಮ್ರದಂತೆ ಕೆಂಪುವರ್ಣದಲ್ಲಿರುತ್ತದೆ. ಇದು ಅತ್ಯಂತ ಹೆಚ್ಚು ಪೌಷ್ಠಿಕಾಂಶ ಹೊಂದಿವೆ ಮಾನವನ ದೇಹಕ್ಕೆ ಅಗತ್ಯವಾದ ಆ್ಯಂಟಿಆಕ್ಸಿಂಡೆಟ್ಗಳು ಈ ಹಣ್ಣಿನಲ್ಲಿ ಯಥೇಚ್ಛವಾಗಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಈ ತಳಿಗೆ “ಸಿದ್ಧ” ಎಂದು ನಾಮಕರಣ ಮಾಡಲಾಗಿದೆ. ಈ ಅಪೂರ್ವ ಮರದ ಸಂರಕ್ಷಣೆಗಾಗಿ 2017ರ ಸೆಪ್ಟ್ಟೆಂಬರ್ನಲ್ಲಿ ಕರ್ನಾಟಕದ ರಾಜ್ಯಪಾಲ ವಜುಬಾಯಿವಾಲಾ, ಪರಮೇಶ್ವರ್ ಅವರನ್ನು ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು.
ಮುಂಬರುವ ಮೂರು ವರ್ಷಗಳಲ್ಲಿ ಸಿದ್ದು ಹಲಸಿನ ಕಸಿಗಿಡ ಸಿದ್ಧ ಮಾಡಲು ತೋಟಗಾರಿಕಾ ಕೇಂದ್ರವು ಪರಮೇಶ್ವರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೇಂದ್ರವು ಹಲಸಿನ ಕಸಿ ತುಂಡುಗಳಿಗೆ ರೂ.200ರಂತೆ ಮಾರಲು ಉದ್ಧೇಶಿಸಿದೆ.ಇದರಲ್ಲಿ ಶೇಕಡ 75 ಭಾಗದ ಮೊತ್ತವನ್ನು ಫಲಾನುಭವಿ ರೈತನಿಗೆ ನೀಡಲಾಗುವುದು. ಈ ವಿಶೇಷ ಗುಣಗಳುಳ್ಳ ಹಲಸಿನ ಗಿಡಗಳಿಗೆ ಬೇಡಿಕೆ ಹೆಚ್ಚಾಗಿದೆ. ತುಮಕೂರಿನ ಹಿರೇಹಳ್ಳಿಯಲ್ಲಿ ಗಿಡಗಳ ಮಾರಾಟವನ್ನು ಆರಂಭಿಸಲಾಗಿದೆ. ಈ ಮರವನ್ನು ಗುರುತಿಸಿ ಕೇವಲ 2 ತಿಂಗಳಲ್ಲಿ ಸುಮಾರು 10ಸಾವಿರಕ್ಕೂ ಅಧಿಕ ಗಿಡಗಳಿಗೆ ಬೇಡಿಕೆ ಬಂದಿದೆ ಎಂದು ಐಐಹೆಚ್ಆರ್ನ ನಿರ್ದೇಶಕ ಹೆಚ್. ಆರ್ ದಿನೇಶ್ ಮಾಹಿತಿ ನೀಡಿರುವರು.
ಇದು ಅತ್ಯಂತ ಸುಗಂಧಭರಿತ ಹಲಸಾಗಿದೆ. ಇದರ ವೈಶಿಷ್ಟ್ಯಮಯ ಗುಣಗಳಿಂದ ಕರ್ನಾಟಕದ ಅನುವಂಶಿಕ ಸಂಪತ್ತಾಗಿ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಲಿದೆ ಎಂದು ಸಸ್ಯಶಾಸ್ತ್ರಜ್ಞರು ಅಭಿಪ್ರಾಯಿಸಿರುವರು. ಈ ಹಲಸು ಸರಾಸರಿ 2.5 ಕಿಲೋ ಗ್ರಾಂ ತೂಗುತ್ತದೆ. ವಾರ್ಷಿಕವಾಗಿ ಈ ಮರವು 450 ಹಣ್ಣು- 1,100 ಕೆ.ಜಿ ಉತ್ಪಾದಿಸಲಿದೆ ಎಂದು ಅಂದಾಜಿಸಲಾಗಿದೆ. ಮಾರ್ಚ್-ಜುಲೈ ಮಾಸದವರೆಗೆ ಈ ಮರದಲ್ಲಿ ಫಲ ದೊರೆಯುವದರಿಂದ ಬೇಡಿಕೆಯೂ ಹೆಚ್ಚಾಗಿದೆ. ಕೇರಳದಲ್ಲಿ ಇದೇ ರೀತಿಯ ಕೆಂಬಣ್ಣದಿಂದ ಕೂಡಿದ 2 ಹಲಸಿನ ಪ್ರಬೇಧಗಳಿವೆ. ಇವು ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ತೊಳೆಗಳ ಬಣ್ಣದಲ್ಲಿ ವೈವಿಧ್ಯತೆ ಕಾಣಬಹುದೆಂದು ವಿಜ್ಞಾನಿಗಳ ಅಭಿಪ್ರಾಯ.
ಈ ಹಿಂದೆ ಹಲಸಿನ ತಜ್ಞ ಡಾ. ಕರುಣಾಕರ್ ಅವರ ಪ್ರಯತ್ನದ ಫಲವಾಗಿ ಬೆಂಗಳೂರಿನ ಐಐಹೆಚಾರ್ನಲ್ಲಿ ಹಲಸಿನ ಉತ್ಸವವನ್ನು ಆಯೋಜಿಸಲಾಗಿತ್ತು. ಇದರಲ್ಲಿ 65 ಪ್ರಬೇಧಗಳ ಹಣ್ಣುಗಳು ಪ್ರದರ್ಶಿತವಾಗಿದ್ದವು. ಇವುಗಳಲ್ಲಿ ತುಮಕೂರು ವ್ಯಾಪ್ತಿಯಿಂದ ತಂದ 42 ಪ್ರಬೇಧಗಳು ಕೆಂಬಣ್ಣದಲ್ಲಿದ್ದವು.
ಸಿದ್ಧು ಹಲಸಿನ ವೈಶಿಷ್ಟ್ಯತೆ: ಇದರ ಪ್ರತಿ ನೂರು ಗ್ರಾಂ. ತೊಳೆಯಲ್ಲಿ ಪ್ರತಿ 2ಮಿಲಿಗ್ರಾಂ ಲೈಕೋಪಿನ್ ಅಂಶವನ್ನು ಹೊಂದಿದೆ. ಸಾಮಾನ್ಯ ಹಲಸಿನ ಪ್ರಬೇಧ ಗಳಲ್ಲಿ ಇದು 0.2 ಮಿಲಿ ಗ್ರಾಂ.ಗಿಂತಲೂ ಕಡಿಮೆ ಇರುವುದಂತೆ.
-ಕೂಡಂಡ ರವಿ,
ಹೊದ್ದೂರು.