ಸೋಮವಾರಪೇಟೆ, ಜ. 7: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ-ಕಂಬ್ತಳ್ಳಿ ರಸ್ತೆ ಕಾಮಗಾರಿಗೆ ತಡೆಯೊಡ್ಡಿದರೆ ಹೋರಾಟ ಮಾಡಲಾಗುವದು ಎಂದು ಕಂಬ್ತಳ್ಳಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಪ್ರಮುಖ ಬಿ.ಆರ್. ಪ್ರದೀಪ್, ಕಳೆದ ಅನೇಕ ದಶಕಗಳಿಂದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿರುವ ಕಂಬ್ತಳ್ಳಿ ಗ್ರಾಮಕ್ಕೆ ಇದೀಗ ರಸ್ತೆಯ ಭಾಗ್ಯ ಲಭಿಸಿದ್ದು, ಇದಕ್ಕೆ ಹೊಸತೋಟ ಭಾಗದ ಗ್ರಾ.ಪಂ. ಸದಸ್ಯ ಹಾಗೂ ಸಜ್ಜಳ್ಳಿಯ ವ್ಯಕ್ತಿಯೋರ್ವರು ತಡೆಯೊಡ್ಡುತ್ತಿ ರುವದು ಖಂಡನೀಯ ಎಂದರು.
ರಸ್ತೆಯ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಶಾಲಾ - ಕಾಲೇಜಿಗೆ ತೆರಳಲು ಕಷ್ಟಕರ. ಕೆಸರುಮಯವಾಗುವ ರಸ್ತೆಯನ್ನು ದಾಟಿ ಮುಖ್ಯರಸ್ತೆಗೆ ಬಂದ ನಂತರ ಮತ್ತೊಂದು ಬಟ್ಟೆ ಧರಿಸಿ ಶಾಲಾ - ಕಾಲೇಜಿಗೆ ತೆರಳಬೇಕಿದೆ. ಇಂತಹ ಅವ್ಯವಸ್ಥೆಯಿಂದ ಮುಕ್ತಿ ನೀಡಲು ರೂ. 50 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಂಕ್ರೀಟ್ ಮತ್ತು ಡಾಂಬರು ರಸ್ತೆ ನಿರ್ಮಾಣಕ್ಕೆ ಶಾಸಕ ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದ್ದು, ಕೆಲವರು ಇದೀಗ ರಸ್ತೆ ನಿರ್ಮಾಣಕ್ಕೆ ಅಪಸ್ವರ ಎತ್ತುತ್ತಿರುವದು ಸರಿಯಲ್ಲ ಎಂದರು.
ರಸ್ತೆಗೆ ತಡೆಯೊಡ್ಡುತ್ತಿರುವ ಈ ಈರ್ವರು ಗ್ರಾಮದ ಪ್ರತಿ ಕುಟುಂಬದಿಂದ ತಲಾ 10 ಸಾವಿರಕ್ಕೆ ಹಣದ ಬೇಡಿಕೆಯಿಟ್ಟಿದ್ದು, 30 ಕುಟುಂಬದಿಂದ ತಲಾ 10 ಸಾವಿರ ನೀಡಿದರೆ ಮಾತ್ರ ರಸ್ತೆ ನಿರ್ವಹಿಸಲು ಬಿಡುತ್ತೇವೆ. ಇಲ್ಲವಾದಲ್ಲಿ ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡುತ್ತೇವೆ ಎಂದು ‘ಬ್ಲಾಕ್ ಮೇಲ್’ ಮಾಡುತ್ತಿದ್ದಾರೆ ಎಂದು ಗೋಷ್ಠಿಯಲ್ಲಿದ್ದ ಧರ್ಮೇಂದ್ರ ಆರೋಪಿಸಿದರು.
ಈಗಾಗಲೇ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ದಿನಗಳ ಹಿಂದೆ ಐಗೂರು ಗ್ರಾ.ಪಂ. ಸದಸ್ಯ ಸ್ಥಳಕ್ಕೆ ಆಗಮಿಸಿದ ಸಂದರ್ಭ, ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ನಾಲ್ಕೈದು ಮಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ ಎಂದರು.
ಹೊಸತೋಟ ವಾರ್ಡ್ ಪ್ರತಿನಿಧಿಸುವ ಈ ಸದಸ್ಯನಿಗೂ ಕಂಬ್ತಳ್ಳಿಗೂ ಯಾವದೇ ಸಂಬಂಧವಿಲ್ಲ. ಆದರೂ ಸಹ ಸಜ್ಜಳ್ಳಿಯ ವ್ಯಕ್ತಿಯೊಂದಿಗೆ ಸೇರಿಕೊಂಡು ಹಣ ಮಾಡುವ ಯತ್ನ ನಡೆಸುತ್ತಿದ್ದಾರೆ. ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಒಂದು ವೇಳೆ ಕಾಮಗಾರಿಯನ್ನು ಸ್ಥಗಿತಗೊಳಿಸಿದರೆ ಗ್ರಾಮಸ್ಥರೆಲ್ಲರೂ ಸೇರಿ ಐಗೂರು ಗ್ರಾಮ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯ ಎದುರು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಹಲವಾರು ದಶಕಗಳ ನಂತರ ನಮ್ಮ ಗ್ರಾಮಕ್ಕೆ ರಸ್ತೆಯಾಗುತ್ತಿದ್ದು, ಇದಕ್ಕೆ ತಡೆಯೊಡ್ಡುವದು ಸರಿಯಲ್ಲ. ತಕ್ಷಣ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರ ಉಪಯೋಗಕ್ಕೆ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರುಗಳಾದ ಚಾಮಿ, ಸರಸ್ವತಿ, ಕಮಲಾಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.