ಸೋಮವಾರಪೇಟೆ, ಜ. 7: ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಬೀಟ್ ಸಭೆಯಿಂದಾಗಿ ಮಂಕ್ಯ ಹಾಗೂ ಚಾಮೇರಮನೆ ಗ್ರಾಮಸ್ಥರು ಎದುರಿಸುತ್ತಿದ್ದ ಎರಡು ಪ್ರಮುಖ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ.

ಈ ಹಿಂದೆ ಹರಗ ಮಾರ್ಗವಾಗಿ ಮಂಕ್ಯದವರೆಗೆ ಆಗಮಿಸುತ್ತಿದ್ದ ಖಾಸಗಿ ಬಸ್ ಕಳೆದ ಒಂದು ವರ್ಷದಿಂದ ಸಂಚಾರ ಸ್ಥಗಿತಗೊಳಿಸಿ ದ್ದರಿಂದ ಈ ಭಾಗದ ಮಂದಿ ಸಮಸ್ಯೆಗೆ ಸಿಲುಕಿದ್ದರು. ಇದರೊಂದಿಗೆ ಆಹಾರ ಇಲಾಖೆಯಿಂದ ಬರುತ್ತಿದ್ದ ಸಂಚಾರಿ ಪಡಿತರ ವಾಹನ ಕಳೆದ ನಾಲ್ಕೈದು ತಿಂಗಳಿನಿಂದ ಸ್ಥಗಿತಗೊಂಡಿತ್ತು. ಪರಿಣಾಮ 4 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿ ಹರಗದಿಂದ ಪಡಿತರವನ್ನು ಸಂಗ್ರಹಿಸಬೇಕಿತ್ತು.

ಈ ಬಗ್ಗೆ ಮಂಕ್ಯ ಗ್ರಾಮದಲ್ಲಿ ನಡೆದ ಪೊಲೀಸ್ ಬೀಟ್ ಸಭೆಯಲ್ಲಿ ಗ್ರಾಮಸ್ಥರು ಗಮನ ಸೆಳೆದಿದ್ದು, ಇದಕ್ಕೆ ಸ್ಪಂದಿಸಿದ ಮಾದಾಪುರ ಪೊಲೀಸ್ ಉಪಠಾಣೆ ವ್ಯಾಪ್ತಿಯ ಮಂಕ್ಯ ಗ್ರಾಮದ ಬೀಟ್ ಪೊಲೀಸ್ ಸಜಿ, ಎಎಸ್‍ಐ ಪೊನ್ನಪ್ಪ, ಠಾಣಾಧಿಕಾರಿ ಶಿವಶಂಕರ್ ಅವರುಗಳು, ಬಸ್ ಮಾಲೀಕರೊಂದಿಗೆ ಮಾತುಕತೆ ನಡೆಸಿ ಮಂಕ್ಯದವರೆಗೆ ಸಂಚಾರವನ್ನು ವಿಸ್ತರಿಸಿದ್ದಾರೆ.

ಅಂತೆಯೇ ಆಹಾರ ಇಲಾಖಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಇದೀಗ ಚಾಮೇರಮನೆ ಹಾಗೂ ಮಂಕ್ಯ ಗ್ರಾಮದವರೆಗೆ ಆಹಾರ ಸರಬರಾಜು ಮಾಡಲು ಸಂಚಾರಿ ವಾಹನ ಆಗಮಿಸುತ್ತಿದೆ. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಪೊಲೀಸ್ ಇಲಾಖೆಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.