ಸುಂಟಿಕೊಪ್ಪ, ಜ. 7: ಇಲ್ಲಿನ ವಿಶ್ವಹಿಂದ್ ಪರಿಷತ್ ವತಿಯಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನಿಧನಕ್ಕೆ ಸ್ವಾಮೀಜಿಯ ಭಾವ ಚಿತ್ರವನ್ನಿಟ್ಟು ಪಷ್ಪಾರ್ಚಣೆ ಮಾಡಿ ಸಂತಾಪ ಸೂಚಿಸಲಾಯಿತು.

ಮಾದಾಪುರ ರಸ್ತೆಯ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಿರಿಯ ಅರ್ಚಕ ಗಣೇಶ್ ಶರ್ಮ ಮಾತನಾಡಿ ಈ ದೇಶ ಕಂಡ ಮಹಾನ್ ಸಂತರಲ್ಲಿ ಸಂತರಾಗಿದ್ದ ಶ್ರೀಗಳು ಎಲ್ಲಾ ಧರ್ಮ ವರ್ಗದವರನ್ನು ಸಮಾನವಾಗಿ ಕಂಡ ಸ್ವಾಮೀಜಿ ಮಡಿವಂತಿಕೆಯನ್ನು ಬಿಟ್ಟು ಎಲ್ಲರೊಂದಿಗೆ ಬೆರೆತು ತಮ್ಮ ಜೀವಿತಾವದಿಯಲ್ಲಿ ಸಾಮಾಜಿಕ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದರು.

ಶ್ರೀಗಳ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ವಿಶ್ವಹಿಂದ್ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ ಸ್ವಾಮೀಜಿಯವರಲ್ಲಿದ್ದ ಸರಳ ನಡೆನುಡಿ ಸಾಮಾಜಿಕ ಸೇವೆ ಸಮಾಜಕ್ಕೆ ಮಾದರಿ. ಧರ್ಮಕ್ಕೆ ತೊಂದರೆ ಎಂದಾಗ ಎದ್ದು ನಿಲ್ಲುತ್ತಿದ್ದ ಅವರು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯನ್ನು ಹುಟ್ಟು ಹಾಕಲು ಅವರ ಶ್ರಮ ಅಪಾರ ಅವರ ಅಗಲಿಕೆಯಿಂದ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಿಸುವ ಮೂಲಕ ಅವರ ಆಸೆಯನ್ನು ನೆರವೇರಿಸುವಂತಾಗಬೇಕು ಎಂದರು.

ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾವತಿ, ಪ್ರಮುಖರಾದ ಮುರಳೀಧರ್ ಕಾಮತ್, ಸೂರ್ಯಕಾಂತ್, ಅಶೋಕ್ ಶೇಟ್, ಸಿ. ಚಂದ್ರ, ಮಂಜುನಾಥ್ ಭಟ್ ಇತರರು ಪಾಲ್ಗೊಂಡಿದ್ದರು.